ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿಬಿಎ, ಬಿಸಿಎ ಮತ್ತು ಬಿ.ಕಾಂ ಪದವಿಗೆ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಪ್ರ – ಶಿಕ್ಷಣ ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜುಲೈ 13 ರಂದು ಜರಗಿತು.
ಮಾಹೆ ಮಣಿಪಾಲದ ಪ್ರೊ ಚಾನ್ಸೆಲರ್ ಡಾ. ಹೆಚ್.ಎಸ್. ಬಲ್ಲಾಳ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಪ್ರ ಶಿಕ್ಷಣ ಕಾರ್ಯಕ್ರಮ ಎಂದರೆ ಹಿರಿಯ ಶೈಕ್ಷಣಿಕ ತಜ್ಞರು ಕಿರಿಯರಿಗೆ ಮಾರ್ಗದರ್ಶನ ನೀಡುವ ಉತ್ತಮ ವೇದಿಕೆಯಾಗಿದೆ, ಭಾರತವು ಶೇಕಡಾ 50ರಷ್ಟು ಯುವ ಜನತೆಯನ್ನು ಹೊಂದಿದ್ದು, ಇದು ಜಗತ್ತಿನ ಯಾವದೇಶಕ್ಕೂ ಹೋಲಿಸಿದರೆ ನಮ್ಮಲ್ಲಿಯ ಯುವಜನತೆಗೆ ಸರಿಸಾಟಿಯಿಲ್ಲ, ನಮ್ಮ ಸಂಸ್ಥಾಪಕರಾದ ಡಾ. ತೋನ್ಸೆ ಮಾಧವ ಅನಂತ ಪೈಗಳು ತಿಳಿಸಿರುವಂತೆ ದೇಶದ ಜನಸಂಖ್ಯೆ ಎಂಬುವುದು ಧನಾತ್ಮಕವಾಗಿ ಚಿಂತಿಸಿದರೆ ದುಡಿಯುವ ಕೈಗಳಿಗೆ ಉದ್ಯೋಗ, ಹಾಗೆಯೇ ಅಕ್ಷರತೆ ಹಾಗೂ ಆರೋಗ್ಯ ಸಮಾಜದಲ್ಲಿ ಸುವ್ಯವಸ್ಥೆಯಲ್ಲಿ ಇದ್ದರೆ ಬಡತನ ನಿರ್ಮೂಲನೆಯಾಗಲು ಸಾಧ್ಯವಿದೆ, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶದಂತೆ ಪದವಿಯ ಕಲಿಕೆಯ ಜೊತೆಗೆ ಉದ್ಯೋಗ ಕೌಶಲಗಳನ್ನು ಅಳವಡಿಸಿಕೊಂಡಲ್ಲಿ ಈ ಸಂಸ್ಥೆಯಲ್ಲಿ ಕಲಿತ ಅಷ್ಟೂ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ, ಅಂತಹ ವೇದಿಕೆ ನೀಡಲು ಈ ಸಂಸ್ಥೆಯ ಉಪನ್ಯಾಸಕರು ಸದಾ ಬದ್ಧರಾಗಿದ್ದಾರೆ ಎಂದು ಶುಭಹಾರೈಸಿದರು.
ಮಣಿಪಾಲದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಮುಖ್ಯಸ್ಥರಾದ ಬ್ರಿಗೇಡಿಯರ್ (ಡಾ) ಎಸ್. ಎಸ್ ಪಾಬ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಂಪ್ಲಿಯನ್ಸ್ ನಿರ್ದೇಶಕರಾದ ಪ್ರೊ. ಆಶಾ ಕುಮಾರಿ, ಉದ್ಯೋಗ ಹಾಗೂ ಪ್ರವೇಶಾತಿ ನಿರ್ದೇಶಕಿ ಡಾ. ಪದ್ಮಲತಾ ಉಪಸ್ಥಿತರಿದ್ದರು. ಹಾಗೆಯೇ ಮಣಿಪಾಲದ ಡಾ. ಟಿ. ಎಂ. ಎ ಪೈ ಫೌಂಡೇಷನ್ ಗೆ ಸಂಬಂಧಿಸಿದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭಾ ಕಾಮತ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಪ್ರೊ. ಜಾವೇದ್ ಸಂಯೋಜಿಸಿದ ಕಾಲೇಜಿನ ಕಾರ್ಯಚಟುವಟಿಕೆಗಳ ವಿಡಿಯೋ ನೂತನ ವಿದ್ಯಾರ್ಥಿಗಳ ಮತ್ತು ಪೋಷಕರ ಸಮ್ಮುಖದಲ್ಲಿ ಪ್ರದರ್ಶಿಸಲ್ಪಟ್ಟು ಮೆಚ್ಚುಗೆಗೆ ಪಾತ್ರವಾಯಿತು.
ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ 7ನೇ ರ‍್ಯಾಂಕ್ ಪಡೆದು ಕಾಲೇಜಿನಲ್ಲಿ ಬಿಬಿಎ ಪದವಿಗೆ ಸೇರ್ಪಡೆಯಾಗಿರುವ ಕೃಪಾಶ್ರೀಗೆ ಸನ್ಮಾನಿಸಲಾಯಿತು. ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಸಹನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಪ್ರಾಚಾರ್ಯರ ನೇತೃತ್ವದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರಿಂದ ಕ್ರೀಡೆ, ಎನ್. ಎಸ್. ಎಸ್, ರೆಡ್ ಕ್ರಾಸ್, ವೃತ್ತಿ ಮಾರ್ಗದರ್ಶನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.