ಕೊಣಾಜೆ: ವಿಶ್ವಮಂಗಳ ಪದವಿ ಪೂರ್ವ ಕಾಲೇಜು, ಕೊಣಾಜೆ ಇಲ್ಲಿ ಜುಲೈ 11, 2026 ರಂದು ಕಾಲೇಜಿನ ಸಾಮಾನ್ಯ ಮಹಾಸಭೆ (General Body Meeting) ಹಾಗೂ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ‘ಕೌಶಲ್ಯ ಕ್ಲಬ್’ (Skill Club) ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಸ್ವಸ್ತಿಕಾ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲರಾದ ಡಾ. ಮಾಲಿನಿ ಹೆಬ್ಬಾರ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನ ಮಾತ್ರವಲ್ಲದೆ, ಪ್ರಾಯೋಗಿಕ ಕೌಶಲ್ಯಗಳು ಅತ್ಯಂತ ಅವಶ್ಯಕವಾಗಿದೆ. ಸ್ವಸ್ತಿಕಾ ಬಿಸಿನೆಸ್ ಸ್ಕೂಲ್ ಸಹಯೋಗದ ಈ ಕೌಶಲ್ಯ ಕ್ಲಬ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಡಿಪು ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ರಾಜೇಶ್ ಅವರು ಮಾತನಾಡಿ, ಶಾಲಾ-ಕಾಲೇಜು ದಿನಗಳಲ್ಲೇ ನಾಯಕತ್ವ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ಯಶಸ್ಸಿಗೆ ದಾರಿದೀಪವಾಗುತ್ತದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಮಂಗಳ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರೊ. ಜಗದೀಶ್ ಪ್ರಸಾದ್ ಅವರು ವಹಿಸಿದ್ದರು. ವೇದಿಕೆಯಲ್ಲಿ ವಿಶ್ವಮಂಗಳ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಶ್ರೀ ಸುಬ್ಬ ನಾಯ್ಕ್, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಬಸವಣ್ಣ, ವಿಶ್ವಮಂಗಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಿಯಾ ಹಾಗೂ ಕೌಶಲ್ಯ ಕ್ಲಬ್‌ನ ಸಂಯೋಜಕಿ ಶ್ರೀಮತಿ ನಿವೇದಿತಾ ಉಪಸ್ಥಿತರಿದ್ದರು.
ವಿಶ್ವಮಂಗಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ ಡಿ. ಶೆಟ್ಟಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿ, ಕಾಲೇಜಿನ ಶೈಕ್ಷಣಿಕ ಪ್ರಗತಿ ಹಾಗೂ ಕೌಶಲ್ಯ ಕ್ಲಬ್‌ನ ಉದ್ದೇಶಗಳನ್ನು ವಿವರಿಸಿದರು. ಉಪನ್ಯಾಸಕಿ ಶ್ರೀಮತಿ ಮನೋಹರಿ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಅಮೃತಾ ವಂದಿಸಿದರು. ಉಪನ್ಯಾಸಕಿ ಜಯಶ್ರೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.