ಕಕ್ಯಪದವು : ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಭೆಯನ್ನು ಮೇ 29 ರಂದು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವಿಜಯ ಕೆ ಇವರು ಪೋಷಕರನ್ನು ಉದ್ದೇಶಿಸಿ ಶಾಲಾ ನಿಯಮಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅಧ್ಯಯನದ ಪ್ರಗತಿ, ಹಾಜರಾತಿ, ಪರೀಕ್ಷೆ ತಯಾರಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆ ಹಾಗೂ ಪೋಷಕರ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ, ವಿದ್ಯಾಸಂಸ್ಥೆಯೊಂದಿಗೆ ಪೋಷಕರ ಸಹಕಾರ ಸದಾ ಅಗತ್ಯವೆಂದು ತಿಳಿಸಿದರು.
ತದನಂತರ ಪೋಷಕರ ಅಭಿಪ್ರಾಯ, ಸಲಹೆ,ಸೂಚನೆಗಳಿಗೆ ಅವಕಾಶ ಕಲ್ಪಿಸಲಾಯಿತು.
ಪೋಷಕರ ಸಲಹೆ ಸೂಚನೆಗಳಿಗನುಸರವಾಗಿ
ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋರವರು ವಿದ್ಯಾಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ವಿದ್ಯಾಸಂಸ್ಥೆಯು ನೀಡುತ್ತಾ ಬಂದಿರುವ ಶಾಲಾ ವ್ಯವಸ್ಥೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ಪೋಷಕರಿಗೆ ಮನಮುಟ್ಟುವಂತೆ ತಿಳಿಯಪಡಿಸಿದರು.ಪೋಷಕರ ಸೂಚನೆಗಳನ್ನು ಸ್ವೀಕರಿಸಿ ಸೂಕ್ತ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಯೋಜಕರಾದ ಯಶವಂತ್ ಜಿ ನಾಯಕ್ ರವರು ಪೋಷಕರ ಅಭಿಪ್ರಾಯಗಳಿಗೆ ಸ್ಪಂದಿಸಿ ಸೂಕ್ತ ರೀತಿಯ ಪರಿಹಾರಗಳನ್ನು ತಿಳಿಸುವುದರ ಮೂಲಕ ವಿದ್ಯಾ ಸಂಸ್ಥೆಯು ಕೈಗೊಂಡಿರುವ ನೂತನ ನಿಯಮಾವಳಿಗಳನ್ನು ಸ್ಪಷ್ಟ ಪಡಿಸಿದರು. ವಿದ್ಯಾರ್ಥಿಗಳ ಉತ್ತಮ ಶಿಕ್ಷಣ, ಶಿಸ್ತು ಮತ್ತು ಭವಿಷ್ಯ ನಿರ್ಮಾಣದಲ್ಲಿ ವಿದ್ಯಾಸಂಸ್ಥೆಯ ಜೊತೆಗೆ ಪೋಷಕರ ಪಾತ್ರವೂ ಅತ್ಯಂತ ಮಹತ್ವವೆಂದು ತಿಳಿಸಿದರು.
ಸಭೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಪೋಷಕರು, ಎಲ್ಲಾ ಶಿಕ್ಷಕ ವೃಂದ ಹಾಗೂ ಬೋಧಕೇತರ ವರ್ಗ ಉಪಸ್ಥಿತಿಯಲ್ಲಿದ್ದರು. ಸಂಸ್ಥೆಯ ಸಹ ಶಿಕ್ಷಕಿಯರಾದ ಶ್ರೀಮತಿ ದಿವ್ಯ ಕೆ ಹಾಗೂ ಶ್ರೀಮತಿ ಪ್ರಿಯತ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.