ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ವತಿಯಿಂದ ನಡೆಸಲ್ಪಡುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ, ಕಕ್ಯಪದವು ಇಲ್ಲಿನ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಭಾವಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಪ್ರಾಂಶುಪಾಲರಾದ ಜೊಸ್ಟನ್ ಲೋಬೊ , ಸಂಸ್ಥೆಯ ಸಂಯೋಜಕರಾದ ಯಶವಂತ ಜಿ. ನಾಯಕ್ ಹಾಗೂ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ ಅವರು ಭಾಗವಹಿಸಿದರು.
ಕಾರ್ಯಕ್ರಮವನ್ನು ದ್ವಿತೀಯ ಪದವಿ ವಿದ್ಯಾರ್ಥಿನಿಯರಾದ ಅಜ್ಮಿಯಾ ಹಾಗೂ ಆಯಿಷತ್ ನುಶ್ರಾ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಥಮ ಪದವಿ ವಿಭಾಗದ ವಿದ್ಯಾರ್ಥಿನಿ ಶೀಮಾ ಶಹದಿಯಾ ಅವರು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.
ಸಂಸ್ಥೆಯ ಸಂಯೋಜಕರಾದ ಯಶವಂತ ಜಿ. ನಾಯಕ್ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ, ಆತ್ಮವಿಶ್ವಾಸ, ಪರಿಶ್ರಮ ಮತ್ತು ಶಿಸ್ತು ಜೀವನದ ಯಶಸ್ಸಿನ ಮೂಲಾಧಾರಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲ ಜೋಸ್ಟನ್ ಲೋಬೋ ವಿದ್ಯಾರ್ಥಿಗಳ ಮೂರು ವರ್ಷಗಳ ಕಾಲೇಜು ಜೀವನವನ್ನು ಸ್ಮರಿಸಿದರು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗಳ ಜೊತೆಗೆ ವ್ಯಕ್ತಿತ್ವ ವಿಕಾಸ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡಿರುವುದನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಯಶಸ್ಸು ಸಾಧಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದ ಸಿಹಿ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿತು. ಪ್ರಥಮ ವಿಭಾಗದ ವಿದ್ಯಾರ್ಥಿನಿ ಜುವೈರಿಯತ್ ವಂದನಾರ್ಪಣೆ ಸಲ್ಲಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.