ಕಿನ್ನಿಕಂಬಳ: ಕಿನ್ನಿಕಂಬಳದ ರೋಸಾ ಮಿಸ್ತಿಕ ಪದವಿ ಪೂರ್ವ ಕಾಲೇಜಿನಲ್ಲಿ ದೇವರ ಸೇವಕ ಮಾನ್ಸೆಂಜರ್ ರೇಮಂಡ್ ಫ್ರಾನ್ಸಿಸ್ ಕಮಿಲಸ್ ಮಸ್ಕರೇನಸ್ ಅವರು ಸ್ಥಾಪಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಅನಿತಾ ಲಿಡಿಯಾ , ಸಂಸ್ಥಾಪಕರ ಆದರ್ಶಮಯ ಜೀವನ, ದೇವರ ಮೇಲಿನ ಅಚಲ ನಂಬಿಕೆ, ಮಾನವ ಸೇವೆಯ ಮನೋಭಾವ ಹಾಗೂ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯ ದೃಷ್ಟಿಕೋನವನ್ನು ಸ್ಮರಿಸಿದರು. ಬೆಥನಿ ಸಂಸ್ಥೆಯ ಬೆಳವಣಿಗೆ ಮತ್ತು ಸೇವಾ ಕಾರ್ಯಗಳು ಸಂಸ್ಥಾಪಕರ ದೂರದೃಷ್ಟಿ, ತ್ಯಾಗ ಹಾಗೂ ಸಮರ್ಪಣೆಯ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾದ ಟರ್ಷಿಯನ್ ನಿರ್ದೇಶಕಿ ಅಲ್ವೀನಾ ಕ್ಲೇರ್ ಬಿ.ಎಸ್.,ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಬೆಥನಿ ಎಂಬ ಪದದ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಂಡು ದಯೆ, ಸಹಾನುಭೂತಿ, ಸತ್ಯನಿಷ್ಠೆ, ಪ್ರಾಮಾಣಿಕತೆ, ಪ್ರೀತಿ, ದೃಢಸಂಕಲ್ಪ ಹಾಗೂ ದೇವರ ಇಚ್ಛೆಗೆ ಸದಾ “ಹೌದು” ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು .
ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಬೆಥನಿ ಸಂಸ್ಥೆಯ ಆದರ್ಶ, ಮೌಲ್ಯಗಳು ಮತ್ತು ಪರಂಪರೆಯನ್ನು ಅನಾವರಣಗೊಳಿಸಿತು.

ಕಾರ್ಯಕ್ರಮದಲ್ಲಿ ಭಗಿನಿ ತೆರೆಸ ಬಿ ಎಸ್ ,ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಅಶ್ವಿತಾ ಮತ್ತು ಉಪನ್ಯಾಸಕಿ ಸುಪ್ರಿಯ ಲೋಪೀಸ್ ಕಾರ್ಯಕ್ರಮವನ್ನು ಸಂಯೋಜಿಸಿದರು
.ವಿದ್ಯಾರ್ಥಿ ಶ್ರೀರಾಮ್ ಜಿ. ಶೆಟ್ಟಿ ಸ್ವಾಗತಿಸಿದರು. ಆಸಿಯಾ ಬಾನು ಕಾರ್ಯಕ್ರಮವನ್ನು ನಿರೂಪಿಸಿ,ಅಬ್ದುಲ್ ಖಾದರ್ ಶಯಾನ್ ವಂದನಾರ್ಪಣೆ ಸಲ್ಲಿಸಿದರು.