ಆದ್ಯತೆಗಳ ಅರಿವು ಯಶಸ್ಸಿನ ಮೊದಲ ಹೆಜ್ಜೆ – ಭಗಿನಿ ಮಾರಿಯೋಲ
ಕಿನ್ನಿಕಂಬಳ: ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್, ಎನ್‌ಎಸ್‌ಎಸ್ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಪ್ರಾಂತ್ಯ ಬೆಥನಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಸಂಯೋಜಕಿ ಭಗಿನಿ ಡಾ. ಮಾರಿಯೋಲ ಬಿಎಸ್ ಮಾತನಾಡಿ, ಉತ್ತಮ ನಾಯಕತ್ವ ಮತ್ತು ಕೌಶಲ್ಯಾಭಿವೃದ್ಧಿ ವಿದ್ಯಾರ್ಥಿಗಳ ಯಶಸ್ಸಿಗೆ ಅತ್ಯಗತ್ಯವಾಗಿದೆ. ನಮ್ಮ ಆದ್ಯತೆಗಳನ್ನು ಸರಿಯಾಗಿ ಗುರುತಿಸಿ ಅವುಗಳತ್ತ ಗಮನಹರಿಸಿದಾಗ ಯಶಸ್ಸಿನತ್ತ ಹೆಜ್ಜೆ ಇಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಥಿಯೇಟರ್ ಕಲಾವಿದ ಶ್ರೀ ಯತೀಶ್ ಕುಡುಪು, ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಶ್ರೀ ರಾಘವೇಂದ್ರ ಹೊಳ್ಳ ಹಾಗೂ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ನಿಶಾಂತ್ ಹಾಗೂ ಮಂತ್ರಿಮಂಡಲದ ಸದಸ್ಯರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಭಗಿನಿ ಅನಿತಾ ಲಿಡಿಯ ಸ್ವಾಗತಿಸಿದರು. ಉಪನ್ಯಾಸಕ ಅವಿಲ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನಾಯಕಿ ಮೇಘನಾ ವಂದಿಸಿದರು