ಕಿನ್ನಿಕಂಬಳ, ಜುಲೈ 8: ರೋಜಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ–ಶಿಕ್ಷಕ ಸಂಘದ ಸಭೆಯು ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಜಾ ಮಿಸ್ತಿಕಾ ಶಿಕ್ಷಣ ಸಂಸ್ಥೆಯ ಸಂಚಾಲಕಿ ಹಾಗೂ ಸಮಿತಿ ಅಧ್ಯಕ್ಷೆ ಭಗಿನಿ ರೋಸ್ ಲೀಟಾ ಬಿ. ಎಸ್. ಮಾತನಾಡಿ, ಶಾಲೆ ಮತ್ತು ಮನೆ ಎಂಬ ಎರಡು ಪ್ರಮುಖ ಸ್ತಂಭಗಳ ನಡುವೆ ಹೆತ್ತವರು ಮತ್ತು ಶಿಕ್ಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಹೆತ್ತವರು ಮಕ್ಕಳ ಕಲಿಕೆ, ಶಿಸ್ತು ಮತ್ತು ಪ್ರತಿಭೆಯನ್ನು ನಿರಂತರವಾಗಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸ್ವಸ್ತಿಕ ಬಿಸಿನೆಸ್ ಸ್ಕೂಲ್, ಮಂಗಳೂರು ಇದರ ಅಧ್ಯಕ್ಷ ಶ್ರೀ ರಾಘವೇಂದ್ರ ಹೊಳ್ಳ ಮಾತನಾಡಿ, ಇಂದಿನ ಸಾಮಾಜಿಕ ಪರಿಸರವನ್ನು ಹೆತ್ತವರು ಸಮರ್ಪಕವಾಗಿ ಅರ್ಥಮಾಡಿಕೊಂಡು ಮಕ್ಕಳನ್ನು ಭವಿಷ್ಯದ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲ ಅವಿಲ್ ಡಿ’ಸಿಲ್ವಾ ಸ್ವಾಗತಿಸಿ, ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಕಾಲೇಜಿನ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಅನಿತಾ ಲಿಡಿಯಾ, ರಕ್ಷಕ–ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ದೀಪಕ್ ಕೋಟ್ಯಾನ್, ಉಪನ್ಯಾಸಕ ವೃಂದ, ಉಪಸ್ಥಿತರಿದ್ದರು.
ಸಹ ಕಾರ್ಯದರ್ಶಿ ಸುಜಾತ ಸನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ದೀಕ್ಷಾ ವಂದನಾರ್ಪಣೆಗೈದರು.