ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಭಾರತ್ ಕೇರ್ ಸಂಸ್ಥೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯುರಿಟಿ ಕುರಿತು ಹತ್ತು ದಿನಗಳ ವಿಶೇಷ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಜು. 23 ರಿಂದ ಆ. 06ರವರೆಗೆ ಆಯೋಜಿಸಲಾಗಿತ್ತು.

ಭಾರತ್ ಕೇರ್ ಸಂಸ್ಥೆಯಿಂದ ಹನಿವೆಲ್ ಫ್ಯೂಚರ್ ಸ್ಕಿಲ್ ಎಡ್ಜ್ ಕಾರ್ಯಕ್ರಮದಡಿಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಭಾರತ್ ಕೇರ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಸುಬ್ರಮಣಿ ಪಿ.ವಿ. ಇವರ ನೇತೃತ್ವದಲ್ಲಿ ನಡೆಸಿದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಮ್ ಎಮ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತಾ ಕೆ. ಉಪಸ್ಥಿತರಿದ್ದು ಶುಭಹಾರೈಸಿದರು.

ನೆಹರೂ ಮೆಮೋರಿಯಲ್ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿ ತರಬೇತಿ ಪಡೆದುಕೊಂಡರು. ಕಾಲೇಜಿನ ಅಧ್ಯಾಪಕರ ಸಂಘದ ಕಾರ್ಯದರ್ಶಿ ದಿವ್ಯಾ ಟಿ.ಎಸ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಧನ್ಯವಾದಗೈದರು.