“ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು” ಇದರ ವತಿಯಿಂದ “ಯಕ್ಷಧ್ರುವ – ಯಕ್ಷಶಿಕ್ಷಣ” ಯೋಜನೆಯನ್ವಯ ಸ್ಥಳೀಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿದ್ಯಾಲಯ ಎಡಪದವು ಇಲ್ಲಿ ಯಕ್ಷಗಾನ ತರಗತಿಯನ್ನು ದಿನಾಂಕ 22- 06 -2026 ರಂದು ಉದ್ಘಾಟಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಯುತ ಪ್ರೇಮನಾಥ ಶೆಟ್ಟಿ ಅವರು ವಹಿಸಿಕೊಂಡಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಸಾದ್ ಕುಮಾರ್ ಎಡಪದವು, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡಬಿದ್ರೆ ಘಟಕದ ಅಧ್ಯಕ್ಷರಾದ ಶ್ರೀ ದಿವಾಕರ್ ಶೆಟ್ಟಿ, ಸಂಚಾಲಕರಾದ ಶ್ರೀ ಮನೋಜ್ ಕುಮಾರ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪೊಳಲಿ ಕೈಕಂಬ ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ಭಂಡಾರಿ ಹಾಗೂ ಯಕ್ಷಗಾನ ತರಬೇತಿಯ ಗುರುಗಳಾದ ಶ್ರೀ ದಿನೇಶ್ ಬಂಗೇರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಎಸ್ ಪ್ರಭು ಅವರು ಸ್ವಾಗತಿಸಿ ಯಕ್ಷಧ್ರುವ ಫೌಂಡೇಶನ್ ನ ಧ್ಯೇಯ,ಉದ್ದೇಶ,ನೆರವು, ಸಾಧನೆ,ಸಾಗಿ ಬಂದ ಪಯಣದ ಹಾದಿಯ ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿದರು.
ಯಕ್ಷಗಾನ ಕೇವಲ ಜನಪದೀಯವಲ್ಲದೆ ಶಾಸ್ತ್ರೀಯ ಹಾಗೂ ದೈವೀಕ ಕಲೆಯಾಗಿದ್ದು ಅದನ್ನು ಕಲಿಯುವುದು ವಿದ್ಯಾರ್ಥಿಗಳ ಬದುಕಿನಲ್ಲಿ ಶ್ರೇಯಸ್ಸನ್ನು ಒದಗಿಸುವುದಲ್ಲದೆ ಪ್ರತಿಭಾ ಪ್ರದರ್ಶನದೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಇದು ಸಹಕಾರಿಯಾಗಿದೆ ಎಂದು ಯಕ್ಷಗುರುಗಳು ಅಭಿಪ್ರಾಯ ಪಟ್ಟರು. ವಿದ್ಯಾರ್ಥಿಗಳು ಈ ಉಚಿತ ಶಿಕ್ಷಣದ ಸದುಪಯೋಗವನ್ನು ಪಡೆದುಕೊಂಡು ಈ ಕಲೆಯನ್ನು ಉಳಿಸಿ ಬೆಳೆಸುವಂತೆ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಕರೆಯಿತ್ತರು. ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಶಾಂತರಾಮ ರೈ ಡಿ. ವಿ. ಇವರ ಕಾರ್ಯಕ್ರಮ ನಿರೂಪಣೆ ಹಾಗೂ ಮುಖ್ಯ ಶಿಕ್ಷಕ ಶ್ರೀವಾಸು.ಕೆ.ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.