ಯೋಚನೆ ಜಾಗೃತ ಮನಸ್ಸಿನದ್ದು, ಬದುಕು ಸುಪ್ತ ಮನಸ್ಸಿನದ್ದು :ಕೆ.ವಿ. ಹೇಮನಾಥ
ಎನ್.ಎಂ.ಸಿ: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನೂತನವಾಗಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಅಭಿವಿನ್ಯಾಸ ಕಾರ್ಯಕ್ರಮ ಜುಲೈ 20 ಸೋಮವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಗಣ್ಯರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಕಾರ್ಯದರ್ಶಿಗಳಾದ ಕೆ.ವಿ ಹೇಮನಾಥರವರು ಮಾತನಾಡುತ್ತಾ “ಜಾಗೃತ ಮನಸ್ಸು ತಾರ್ಕಿಕ ನಿರ್ಧಾರಗಳಿಗೆ ಕಾರಣವಾದರೆ, ಸುಪ್ತ ಮನಸ್ಸು ನಮ್ಮ ಆಳವಾದ ನಂಬಿಕೆಗಳು ಮತ್ತು ಭಾವನೆಗಳನ್ನು ನಿಯಂತ್ರಿಸುತ್ತದೆ. ಇವೆರಡರ ಸಮತೋಲನದಿಂದ ಜೀವನದ ಯಶಸ್ಸು ಮತ್ತು ನೆಮ್ಮದಿ ಸಾಧ್ಯ. ಪದವಿಯ ನಂತರ ವಿದ್ಯಾರ್ಥಿಗಳಿಗೆ ಹಲವಾರು ವೃತ್ತಿಪರ ಅವಕಾಶಗಳು ಲಭ್ಯವಿರುವುದರಿಂದ ಪದವಿ ಶಿಕ್ಷಣ ಒಂದು ಉತ್ತಮ ಹಾದಿಯಾಗಿದೆ. ಗುರಿ ಸ್ಪಷ್ಟವಾಗಿದ್ದು, ಸಮಯಪಾಲನೆ, ಪರಿಶ್ರಮ ಮತ್ತು ಪ್ರಮಾಣಿಕತೆ ಇರಬೇಕಾಗಿದೆ. ಉಪನ್ಯಾಸಕರ ಮಾರ್ಗದರ್ಶನವನ್ನು ಆಲಿಸಿ ಮುನ್ನಡೆದರೆ ಖಂಡಿತ ಯಶಸ್ಸು ನಿಮ್ಮದು” ಎಂದು ಹೇಳಿದರು ಹಾಗೂ ನೂತನ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಬಳಿಕ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ “ವಿದ್ಯಾರ್ಥಿಯು ದೂರದೃಷ್ಟಿಯೊಂದಿಗೆ ಜ್ಞಾನ ಮತ್ತು ಕೌಶಲ್ಯಾರ್ಜನೆಗೆ ಒತ್ತು ನೀಡಿದರೆ, ತಾನು ಬಯಸಿದ ಉನ್ನತ ಸ್ಥಿತಿಗೆ ತಲುಪುವುದು ಸಾಧ್ಯವಿದೆ. ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ತೆಗೆದುಕೊಂಡು ಶ್ರದ್ಧೆಯಿಂದ ಪ್ರಯತ್ನಿಸಿ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಮ್ ಎಮ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಕುರಿತು ಸವಿವರವಾದ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಡಾ. ಮಮತಾ ಕೆ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ವಿಶ್ವನಾಥ್ ಕೆ. ಟಿ ಉಪಸ್ಥಿತರಿದ್ದರು.
ಪೋಷಕರ ಪರವಾಗಿ ಸುಳ್ಯ ಟಿಎಪಿಸಿಎಂಎಸ್ ಜಯರಾಮ ದೇರಪಜ್ಜನಮನೆ ಮತ್ತು ನೂತನ ವಿದ್ಯಾರ್ಥಿಗಳ ಪರವಾಗಿ ಕು. ಶ್ರೇಯ ಮಾತನಾಡಿದರು. ವಾಣಿಜ್ಯ ವಿಭಾಗ ಸಂಯೋಜಕರಾದ ಶ್ರೀಧರ್ ವಿ ವಂದಿಸಿದರು.
ಕಾಲೇಜಿನ ಅಂತಿಮ ವಿಜ್ಞಾನ ಪದವಿ ವಿದ್ಯಾರ್ಥಿ ಅಭಿಷೇಕ್ ಪ್ರಾರ್ಥಿಸಿ, ಕಾಲೇಜಿನ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥರಾದ ಭವ್ಯ ಪಿ ಎಂ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪಿ ಪಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.