ಬಡಗಕಾರಂದೂರು, ಸೆಪ್ಟೆಂಬರ್ 22, 2026: ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನ ಹಾಗೂ ಸತ್ಯದೇವತೆ ದೇವಸ್ಥಾನದ ಸಮೀಪದಲ್ಲಿರುವ ಬಡಗಕಾರಂದೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 22ರಂದು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಪಂದ್ಯಾಟದಲ್ಲಿ 14 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು ಉತ್ಸಾಹದಿಂದ ಭಾಗವಹಿಸಿದರು. ಪಂದ್ಯಾಟವು ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರಲ್ಲಿ ವಿಶೇಷ ಸಂತಸ ಮೂಡಿಸಿತು.

ಪಂದ್ಯಾಟದ ಯಶಸ್ಸಿಗೆ ಅಳದಂಗಡಿ ಅರಸರಾದ ಪದ್ಮಪ್ರಸಾದ್ ಅಜಿಲರು ಸಂಪೂರ್ಣ ಸಹಕಾರ ನೀಡಿದ್ದು, ಶಾಲೆಯನ್ನು ದತ್ತು ಸ್ವೀಕರಿಸಿರುವ ಶಿವಪ್ರಸಾದ್ ಅಜಿಲರು ಕೂಡ ಅಗತ್ಯ ಸಹಕಾರ ನೀಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಯಶಸ್ವಿಯಾಗಿ ನೆರವೇರಿತು. ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ತಂಡದ ಮನೋಭಾವ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.