ಕಿನ್ನಿಕಂಬಳ: ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜು, ಕಿನ್ನಿಕಂಬಳದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಕನ್ನಡಾಭಿಮಾನ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭಗೊಂಡು, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕನ್ನಡಾಂಬೆಗೆ ಗೌರವ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವೀಣಾ ಅರನ್ಹಾ ಅವರು ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆ, ಮಹಾನ್ ಕವಿಗಳ ಕೊಡುಗೆ ಹಾಗೂ ನಾಡಿನ ಸಾಂಸ್ಕೃತಿಕ ವೈಭವವನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಹೊಂದಿ ಸಾಧನೆಯ ಶಿಖರವೇರಿದರೂ ಮಾತೃಭಾಷೆ ಮತ್ತು ಹುಟ್ಟೂರನ್ನು ಮರೆಯಬಾರದು. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು, ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಎಂಬ ಆಶಯವನ್ನು ಸಾಕಾರಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಅನಿತಾ ಲಿಡಿಯ ಅವರು ಮಾತನಾಡಿ, ಕನ್ನಡ ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಇತರ ಭಾಷೆಗಳನ್ನು ಕಲಿಯುವುದರ ಜೊತೆಗೆ ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಿ, ಗೌರವಿಸಿ, ದೈನಂದಿನ ಜೀವನದಲ್ಲಿ ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿ ಶಿವರಾಜ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕನ್ನಡದ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕನ್ನಡ ಉಪನ್ಯಾಸಕಿ ಸುಜಾತ ಸನಿಲ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ನಿಶಾಂತ್ ನಿರೂಪಿಸಿದರು. ದಿಶಾನ್ ಸ್ವಾಗತಿಸಿ, ರೋಶ್ನಿ ವಂದನಾರ್ಪಣೆಗೈದರು.