ಪಿಲಿಗೂಡು, ಸೆಪ್ಟೆಂಬರ್ 27, 2026: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಲಿಗೂಡು ಇಲ್ಲಿ ಸೆಪ್ಟೆಂಬರ್ 27ರಂದು ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಸಭೆ ನಡೆಯಿತು. ಸಭೆಯಲ್ಲಿ ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ದಾನಿಗಳಾದ ಶ್ರೀ ಪದ್ಮನಾಭ ಶಿಲ್ಪಿ, ಚಾಮುಂಡೇಶ್ವರಿ ಕೃಪ ಇವರ ವತಿಯಿಂದ ಶಾಲಾ ಮಕ್ಕಳಿಗೆ ಜೆರ್ಸಿಗಳನ್ನು ವಿತರಿಸಲಾಯಿತು. ಶಾಲೆಗೆ ಈ ಹಿಂದೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಕ್ಕಿ ಕೆ. ಪಿ. ಅವರು, ಶ್ರೀ ಪದ್ಮನಾಭ ಶಿಲ್ಪಿಯವರು ಶಾಲೆಗೆ ಸ್ಪೋಕನ್ ಇಂಗ್ಲಿಷ್ ಶಿಕ್ಷಕರ ವ್ಯವಸ್ಥೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಕಂಪಾಸ್, ಛತ್ರಿ ಸೇರಿದಂತೆ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿರುವುದನ್ನು ಶ್ಲಾಘಿಸಿದರು. “ತುಂಬಿದ ಕೊಡ ತುಳುಕುವುದಿಲ್ಲ” ಎಂಬ ಮಾತಿಗೆ ಪದ್ಮನಾಭ ಶಿಲ್ಪಿಯವರ ಸೇವಾ ಮನೋಭಾವವೇ ಉತ್ತಮ ನಿದರ್ಶನ ಎಂದು ಅವರು ಹೇಳಿದರು.

ಸಭೆಯಲ್ಲಿ ನವೆಂಬರ್ 4, 2026ರಂದು ಶಾಲೆಯಲ್ಲಿ ನಡೆಯಲಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕುರಿತು ಚರ್ಚಿಸಿ, ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಪದ್ಮನಾಭ ಶಿಲ್ಪಿ, ಶ್ರೀ ಧನಂಜಯಕುಮಾರ್ ವಕೀಲರು, ಕನಿಯೂರು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಗುಂಪಕಲ್ಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಭುವನೇಶ್ವರ ಗುಂಪಕಲ್ಲು, ಪಿಲಿಗೂಡು ಮಹಿಳಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಮತಿ ಭಾರತಿ, ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಪದ್ಮುಂಜದ ನಿರ್ದೇಶಕರು ಹಾಗೂ ಎಸ್‌ಡಿಎಂಸಿ ಸದಸ್ಯರಾದ ಶ್ರೀ ದಿನೇಶ್ ನಾಯ್ಕ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ಇಸ್ಮಾಯಿಲ್, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಕ್ಕಿ ಕೆ. ಪಿ. ಸ್ವಾಗತಿಸಿದರು. ಸಹಶಿಕ್ಷಕರಾದ ಮೋಹನದಾಸ್ ಓ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯು ಶಾಲೆಯ ಅಭಿವೃದ್ಧಿಗೆ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಕಾರದ ಮಹತ್ವವನ್ನು ಸಾರುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.