ಪುತ್ತೂರು : ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಭಾರತದ ಭೂಪಟ ಬಿಡಿಸುವ ಪ್ರಶ್ನೆ ಬರುವುದು ಸಾಮಾನ್ಯ. ಅದಕ್ಕಾಗಿ ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಭಾರತದ ಭೂಪಟವನ್ನು ಪುಸ್ತಕದ ಹಾಳೆಗಳಲ್ಲಿ ಚಿತ್ರಿಸುತ್ತಾ, ರಬ್ಬರಿಂದ ಒರೆಸುತ್ತಾ, ಪುನಃ ಪುನಃ ಪ್ರಯತ್ನಗೈಯುತ್ತಾ ಅಭ್ಯಾಸ ಮಾಡುವುದಿದೆ. ಹೀಗಿರುವಾಗ ಭಾರತದೊಂದಿಗೆ ಸುತ್ತಮುತ್ತಲಿನ ರಾಷ್ಟ್ರಗಳಾದ ಚೀನಾ, ಪಾಕಿಸ್ಥಾನ, ಬಾಂಗ್ಲಾಗಳನ್ನೂ ಚಿತ್ರಿಸಬೇಕೆಂದರೆ ಅನೇಕರು ಶಾಲೆಗೇ ಗುಡ್ ಬೈ ಹೇಳುವ ಅಪಾಯವಿದೆ!
ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದ್ದಾನೆ. ಈತ ಭಾರತದೊಂದಿಗೆ ಸ್ಥಳೀಯ ರಾಷ್ಟ್ರಗಳನ್ನೂ ಚಿತ್ರಿಸುತ್ತಾನೆ. ನೀವಿನ್ನೂ ನೋಡುತ್ತಲೇ ಇದ್ದರೆ ಮತ್ತೂ ಚಿತ್ರಿಸುತ್ತಾ ಸಾಗುತ್ತಾನೆ. ಅಂತಿಮವಾಗಿ ಇಡಿಯ ಪ್ರಪಂಚವನ್ನೇ ನಿಮ್ಮ ಕಣ್ಣ ಮುಂದೆ ಅರಳಿಸಿಬಿಡುತ್ತಾನೆ! ಹೌದು ಪ್ರಪಂಚದ ನೂರ ತೊಂಬತ್ತೊಂದು ದೇಶಗಳನ್ನೂ ಈ ವಿದ್ಯಾರ್ಥಿ ಆಯಾ ಜಾಗದಲ್ಲೇ ಚಿತ್ರಿಸಿ ತೋರಿಸುತ್ತಾನೆ! ಜತೆಗೆ ಭಾರತದ ಭೂಪಟದೊಂದಿಗೆ ಆಯಾ ರಾಜ್ಯಗಳನ್ನೂ ಗುರುತಿಸಿ ಚಿತ್ರಿಸುತ್ತಾನೆ. ಒಮ್ಮೆ ಚಿತ್ರಿಸಲು ಆರಂಭಿಸಿದರೆ ತಿದ್ದದೇ ಕೊನೆಯವರೆಗೂ ಮುಂದುವರೆಯುತ್ತಾನೆಂಬುದು ಸೋಜಿಗ ತರುವ ವಿಚಾರ.
ಪುತ್ತೂರಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ನಾಲ್ಕನೆಯ ತರಗತಿಯ ಪರೀಕ್ಷಿತ್ ಎಂಬ ವಿದ್ಯಾರ್ಥಿಯ ಕೈಚಳಕ, ಜಾಣ್ಮೆ, ಜ್ಞಾನ ಹಾಗೂ ನೆನಪಿನಶಕ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ತಾನು ಚಿತ್ರಿಸಿದ ನೂರತೊಂಬತ್ತೊಂದು ರಾಷ್ಟ್ರಗಳನ್ನೂ ಹೆಸರು ಸಹಿತ ಗುರುತಿಸುತ್ತಾನೆಂಬುದು ಅಚ್ಚರಿಯೇ ಸರಿ!
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ವೃದ್ಧಿಗಾಗಿ ಒಂದೊಂದಕ್ಕೆ ಸರಿಸುಮಾರು ಒಂದೂಮುಕ್ಕಾಲು ಲಕ್ಷ ಬೆಲೆಬಾಳುವ ಹಲವು ಸ್ಮಾರ್ಟ್ಬೋರ್ಡ್ಗಳನ್ನು ಅಳವಡಿಸಲಾಗಿದೆ. ಈ ಬೋರ್ಡ್ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರಬಿಂದುವೆನಿಸಿದೆ. ಅನೇಕ ಹೊಸ ಹೊಸ ಪ್ರಯೋಗಗಳಿಗೆ ಈ ಬೋರ್ಡ್ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ. ಹಲವು ಬಗೆಯ ಸಾಧ್ಯತೆಗಳನ್ನು ಈ ಬೋರ್ಡ್ ಸಾಕಾರಗೊಳಿಸುತ್ತಿರುತ್ತದೆ. ಅದರ ಜೊತೆಗೆ ಶಿಕ್ಷಕರ ಪ್ರೊತ್ಸಾಹವು ಕಾರಣವಾಗಿದೆ.