ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಮಹಿಳೆಯರ ಸಾಧನೆಗಳನ್ನು ಗೌರವಿಸುವುದು ಮತ್ತು ಸಮಾಜದಲ್ಲಿ ಮಹಿಳೆಯರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಆಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ವಿದ್ಯಾ ಉಪಸ್ಥಿತರಿದ್ದು, ಪ್ರಸ್ತುತ ದಿನಗಳಲ್ಲಿ ನಡೆಯುವಂತಹ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗದೆ ತಮ್ಮ ಜೀವನವನ್ನು ಉತ್ತಮ ರೀತಿಯಾಗಿ ಸಾಗಿಸಬೇಕು ಹಾಗೂ ವಿದ್ಯಾರ್ಥಿನಿಗಳಿಗೆ ಹದಿಹರೆಯದ ಆರೋಗ್ಯ ಸಮಸ್ಯೆ, ಸವಾಲುಗಳು, ಮುಟ್ಟಿನ ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ಶುಚಿತ್ವ ಮತ್ತು ರಕ್ತಹೀನತೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಭಾಗವಾಗಿ ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ನೃತ್ಯದ ಮೂಲಕ ವಿದ್ಯಾರ್ಥಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಷ್ಟನ್ ಲೋಬೋ, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಕೆ ಸಂಯೋಜಕರಾದ ಯಶವಂತ ಜಿ ನಾಯಕ್ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಪ್ರೌಢ ವಿಭಾಗದ ಸಹ ಶಿಕ್ಷಕಿ ದಿವ್ಯಶೀ ಕಾರ್ಯಕ್ರಮ ನಿರೂಪಿಸಿದರು.