ಮೂಡ್ಲಕಟ್ಟೆ, 8 ಮಾರ್ಚ್ 2025: ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ರೇಖಾ ವಿ ಬನ್ನಾಡಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಮಹಿಳೆಯು ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿ ಕೊಳ್ಳುತ್ತಿದ್ದಾಳೆ. ಅವಳಿಲ್ಲದ ಜಾಗ ಇಲ್ಲ, ಸಲ್ಲದ ಸ್ಥಳವಿಲ್ಲ. ಇದು ಧನಾತ್ಮಕ ಬೆಳವಣಿಗೆಯಾದರೂ, ಇಂದು ಮಹಿಳೆ ಎದುರಿಸುತ್ತಿರುವ ವಿವಿಧ ಸಮಸ್ಯೆ ಮತ್ತು ಸವಾಲುಗಳನ್ನು ಉದಾಹರಣೆಗಳ ಮೂಲಕ ತಿಳಿಸಿದರು. ಹೆಣ್ಣು ದೇವತೆಯೂ; ಅಲ್ಲ ರಾಕ್ಷಸಿಯೂ ಅಲ್ಲ. ಅವಳ ನೆಲೆಯಲ್ಲಿ ಗಣ್ಯತೆಯಿಂದ ಬದುಕನ್ನು ಬದುಕುವ ಅವಕಾಶ ನೀಡಬೇಕು ಎಂದರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ್ ಕುಮಾರ್, ಸ್ತ್ರೀಯರನ್ನು ಗೌರವಿಸಬೇಕು. ಸ್ತ್ರೀ, ಪುರುಷ ತಾರತಮ್ಯವಿಲ್ಲದೆ ತಮ್ಮ ಪ್ರತಿಭೆಗಳು ಅನಾವರಣ ಗೊಳ್ಳಲು ಅವಕಾಶಗಳು ದೊರಕಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದರು.
ಕಾರ್ಯಕ್ರಮದಲ್ಲಿ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸ್ವರ್ಣರಾಣಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅರ್ಚನಾ ಗದ್ದೆ, ಮಹಿಳಾ ವೇದಿಕೆಯ ಸಂಯೋಜಕರಾದ ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಶಿಲ್ಪಶ್ರೀ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ವೇದಿಕೆ ಅಡಿಯಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದ್ವಿತೀಯ ಬಿಸಿಎನ ವಫಾ಼ ಸ್ವಾಗತಿಸಿದರು. ಪ್ರಥಮ ಬಿಸಿಎ ನ ಶ್ರೀರಕ್ಷಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ತೃತೀಯ ಬಿ.ಕಾಂನ ಶ್ರೇಯಾ ವಂದಿಸಿದರು. ತೃತೀಯ ಬಿಸಿಎ ನ ತರನಾ ಕಾರ್ಯಕ್ರಮವನ್ನು ನಿರೂಪಿಸಿದರು.