ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳ ಬದುಕು ರೂಪುಗೊಳ್ಳಲು ಸಾಧ್ಯ: ಶ್ರೀ ದೇವಪ್ರಸಾದ್ ಪುನರೂರು.
ಮುಲ್ಕಿ, 4 ಸೆಪ್ಟೆಂಬರ್ 2025: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸಿಕೊಳ್ಳಲು ಇರುವ ಸುಂದರ ವೇದಿಕೆ ಮತ್ತು ವಿದ್ಯಾರ್ಥಿಗಳು ಎಲ್ಲಾ ತರಹದ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ದೇವಪ್ರಸಾದ್ ಪುನರೂರು ಹೇಳಿದರು.
ಇವರು ವಿಜಯ ಕಾಲೇಜು ಮುಲ್ಕಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2025-26ರ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿ, ಚಲನಚಿತ್ರ ನಿರ್ದೇಶಕ, ಬರಹಗಾರರು, ಗೀತ ರಚನೆಕಾರ ದೇವದಾಸ ನಾಯಕ್, ವಿದ್ಯಾರ್ಥಿಗಳು ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಪದವಿ ಪ್ರಾಂಶುಪಾಲರಾದ ಪ್ರೊ. ವೆಂಕಟೇಶ ಭಟ್ ಅಧ್ಯಕ್ಷತೆಯನ್ನು ವಹಿಸಿದರು. ಪಿಯು ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಶೈಲಜಾ, ಸಹಯೋಜನಾಧಿಕಾರಿ ಶ್ರೀಮತಿ ಶರ್ಮಿಳ ಇವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಅರುಣಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸ್ವಯಂಸೇವಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ರಿತೇಶ್ ವಂದಿಸಿದರು.