ಸತತ ಪರಿಶ್ರಮ ಹಾಗೂ ಸನ್ಮಾರ್ಗದಲ್ಲಿ ನಡೆಯುವುದರಿಂದ ಯಶಸ್ಸು ಸಾಧ್ಯ : ಶ್ರೀ ಐಕಳ ಹರೀಶ್ ಶೆಟ್ಟಿ
ಮುಲ್ಕಿ, 28 ಆಗಸ್ಟ್ 2025: ವಿಜಯ ಕಾಲೇಜ್ ಮುಲ್ಕಿ ಇಲ್ಲಿ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೆಂಕಟೇಶ್ ಭಟ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉದ್ಘಾಟಕರಾದ ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಮುಖ್ಯ ಹಾಗೂ ನಾವು ಕಲಿತ ಕಾಲೇಜಿನ ಬಗ್ಗೆ ನಮಗೆ ಗೌರವ, ಅಭಿಮಾನ ಇರಬೇಕು ಆಗ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೀ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇವರು ಮಾತನಾಡಿ ವಿದ್ಯಾರ್ಥಿಗಳು ಸನ್ಮಾರ್ಗದಿಂದ ನಡೆಯಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮರಾಗಿ ಬದುಕಿ ದೇಶದ ಸತ್ಪ್ರಜೆಗಳಾಗಬೇಕು ಹಾಗೂ ಎಲ್ಲಾ ಮಕ್ಕಳು ಸನ್ಮಾರ್ಗದಲ್ಲಿ ನಡೆದು ವಿಶ್ವಮಾನವರಾಗಬೇಕು ಎಂದು ಸಂದೇಶವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಸ್ಯಾಮ್ ಮ್ಯಾಬೆನ್, ಪಿಯುಸಿ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾಕ್ಟರ್ ಶೈಲಜಾ ವೈ. ವಿ. ಇವರು ಉಪಸ್ಥಿತರಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಒಂದು ಲಕ್ಷ ರೂಪಾಯಿಯ ದೇಣಿಗೆಯನ್ನು ಕಾಲೇಜಿನ ಅಭಿವೃದ್ಧಿಗೆ ನೀಡಿದರು. ಕುಮಾರಿ ಕಶೀಫಾ ಇವರು ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಇವರು ಪ್ರಾರ್ಥಿಸಿದರು. ಸ್ಪರ್ಶ ಇವರು ಸ್ವಾಗತಿಸಿ, ದೀಪ್ತಿ ಇವರು ವಂದಿಸಿದರು.