ಉಡುಪಿ, 28 ಅಕ್ಟೋಬರ್ 2025: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜಾಲತಾಣದ ಅರಿವು ಎಂಬ ವಿಚಾರಗಳ ಕುರಿತು ವಿಶೇಷೋಪನ್ಯಾಸ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ತರಬೇತುದಾರರು ಹಾಗೂ ಎಂ. ಐ. ಟಿ ಮಣಿಪಾಲದ ಸಹ ಪ್ರಾಧ್ಯಾಪಕರೂ ಆಗಿರುವ ಡಾ. ಹರಿಣಾಕ್ಷಿ ಕರ್ಕೇರ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗೆಗೆ ವಿವರಿಸುತ್ತಾ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ಪದವಿ ಪಡೆದರೂ ಅದು ನಗಣ್ಯ, ಸತ್ಯ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಾಮಾಜಿಕ ಜಾಲತಾಣದ ಉಪಯೋಗದ ಬಗೆಗೆ ಅರಿವು ಅತೀ ಮುಖ್ಯ, ದುರುಪಯೋಗ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತದೆ, ಉದ್ಯೋಗ ಕ್ಷೇತ್ರದಲ್ಲಿ ಮುಂದುವರಿಯಲು ತಂತ್ರಜ್ಞಾನದ ಸದ್ಭಳಕೆ ತುಂಬಾ ಅನಿವಾರ್ಯವಾಗಿದೆ ಎಂದು ಉದಾಹರಣೆ ಮುಖೇನ ಮನದಟ್ಟು ಮಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ತೃತೀಯ ಬಿ. ಕಾಂ ನಾಗಶ್ರೀ ಸ್ವಾಗತಿಸಿದರು, ಶಿವಾಲಿಕ ವಂದಿಸಿದರು, ವರ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.