ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಮಾಜಿಕ ಹೊಂದಾಣಿಕೆ ಸಾಧ್ಯ -ಶ್ರೀ ನಿತ್ಯಾನಂದ ಪಡ್ರೆ
ಕುಂಜಿಬೆಟ್ಟು, ಮಾರ್ಚ್ 12, 2026: ಮನುಷ್ಯ ಹಣ ಮುಖ್ಯವಲ್ಲ ಎಂದು ಹೇಳುತ್ತಾ, ಕೊನೆಯಲ್ಲಿ ಹಣದ ದುರಾಸೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ, ಅಹಿಂಸೆ ಎಂದು ಹೇಳುತ್ತಾ, ಕೊನೆಯಲ್ಲಿ ಹಿಂಸೆಯನ್ನು ಮಾಡುವುದನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಹೀಗಿರುವಾಗ ಮೌಲ್ಯಗಳಿಗೆ ಬೆಲೆಯುಂಟೇ? ಎಂಬುದನ್ನು ತಿಳಿಸುತ್ತಾ, ಮನುಷ್ಯನ ಬದುಕಿನಲ್ಲಿ ಒಟ್ಟು ನಾಲ್ಕು ಮುಖಗಳಿವೆ ವೈಯುಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಮುಖ ಈ ನಾಲ್ಕು ಮುಖಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ, ಹಾಗಾಗಿ ಪ್ರತಿ ಹಂತದಲ್ಲಿ ವಿಕಾಸಹೊಂದುತ್ತ ಈ ನಾಲ್ಕು ಮುಖಗಳಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂಬುದನ್ನು ಎನ್ ಎಸ್ ಎಸ್ ಕಲಿಸುತ್ತದೆ ಇದರಿಂದ ಸಾಮಾಜಿಕ ಹೊಂದಾಣಿಕೆ ಸಾಧ್ಯ ಎಂದು ಮಣಿಪಾಲದ ಉದಯವಾಣಿಯ ವಿಶ್ರಾಂತ ಹಿರಿಯ ಉಪಸಂಪಾದಕರಾದ ಶ್ರೀ ನಿತ್ಯಾನಂದ ಪಡ್ರೆಯವರು ಹೇಳಿದರು.
ಅವರು ಮಾರ್ಚ್ 12ರಂದು ಮಣಿಪಾಲದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಯುಪಿಎಂಸಿಯ ಉದ್ಯೋಗ ಹಾಗೂ ಪ್ರವೇಶಾತಿಯ ನಿರ್ದೇಶಕರಾದ ಡಾ.ಪದ್ಮಲತ, ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಉದ್ಯೋಗಿ ಹಾಗೂ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರಾದ ಶ್ರೀ ಶ್ರೀಕಾಂತ್ ಪ್ರಭು, ಉದಯವಾಣಿಯ ನಿವೃತ್ತ ಉದ್ಯೋಗಿ ಹಾಗೂ ಶಿಬಿರದ ಆಹಾರ ನಿರ್ವಹಣೆಯ ಜವಾಬ್ದಾರಿ ನಿರ್ವಹಿದ ಶಿವಪಾಡಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರಾದ ಶ್ರೀ ಜಿ.ಕೆ ಪಾಟೀಲ್, ಹಾಗೂ ‘ಸ್ನೇಹ ಸಂಗಮ’ ಸರಳೇಬೆಟ್ಟು ಇದರ ಅಧ್ಯಕ್ಷರಾದ ಶ್ರೀ ಗುರುರಾಜ ಭಂಡಾರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ನಡೆಸಿದ ಗುಂಪು ಚರ್ಚೆ ಸ್ಪರ್ಧೆಯಲ್ಲಿ ಸಿಂಧು ತಂಡ ಪ್ರಥಮ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿತು, ಅತ್ಯುತ್ತಮ ತಂಡವಾಗಿ ಕಾವೇರಿ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು, ಶಿಬಿರಕ್ಕೆ ವಿಶೇಷ ಸಹಕಾರ ನೀಡಿದ ವಿನಾಯಕ ತೃತೀಯ ಬಿ.ಕಾಂ ರವರನ್ನು ಗೌರವಿಸಲಾಯಿತು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಕಾಲೇಜಿನ ಪ್ರಾಚಾರ್ಯರು ಅಭಿನಂದನಾ ಪತ್ರವನ್ನು ವಿತರಿಸಿದರು.
ಎನ್.ಎಸ್.ಎಸ್ ಸಹ ಯೋಜನಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು, ಯೋಜನಾಧಿಕಾರಿ ರಾಜೇಶ್ ಕುಮಾರ್ ಧನ್ಯವಾದ ವಿತ್ತರು. ಕನ್ನಡ ಉಪನ್ಯಾಸಕ ಶಶಿಕಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.