ಸಮಾಜದ ನೋವು ನಲಿವನ್ನು ಅರಿಯಲು ಎನ್.ಎಸ್.ಎಸ್ ಉತ್ತಮ ವೇದಿಕೆ – ಮಹೇಶ್ ಠಾಕೂರ್ ನುಡಿ
ಮಣಿಪಾಲ, 6 ಮಾರ್ಚ್ 2026: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಪಾಲ್ಗೊಳ್ಳುವಿಕೆಯಿಂದ ನಾಯಕತ್ವ ಗುಣ, ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ, ಸಮಾಜದ ನೋವು ನಲಿವುಗಳು ಅರ್ಥವಾಗುತ್ತವೆ. ಬಂಧುತ್ವ ಗಟ್ಟಿಗೊಂಡು, ಸರ್ವರಲ್ಲಿ ಬೆರೆಯಲು ಹಾಗೂ ಸರ್ವರನ್ನು ಅರಿಯಲು, ಮುಂದಿನ ಜೀವನ ರೂಪಿಸಲು ಸಹಕಾರವಾಗುತ್ತದೆ ಎಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಮಹೇಶ್ ಠಾಕೂರ್ ಹೇಳಿದರು.
ಅವರು ಮಾರ್ಚ್ 6 ರಂದು ಮಣಿಪಾಲದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆರಂಭಗೊಂಡ ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುಪಿಎಂಸಿಯ ನಿರ್ದೇಶಕರಾದ ಶ್ರೀಮತಿ ಆಶಾ ಕುಮಾರಿ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎಸ್. ದಿನೇಶ್ ಪ್ರಭು, ವೇಗ ಟ್ರಾನ್ಸ್ ಪೋರ್ಟ್ ಮಣಿಪಾಲದ ಮಾಲಕರಾದ ಶ್ರೀ ಸತೀಶ್ ಪಾಟೀಲ್, ಕೃಷ್ಣಪ್ಪ ಸಾಮಂತ ಸ್ಮಾರಕ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗ್ರೇಸಿ ರೆನಿಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭಕೋರಿದರು.
ಯು.ಪಿ.ಎಂ.ಸಿಯ ಪ್ರಾಚಾರ್ಯರಾದ ಶ್ರೀಮತಿ ಪ್ರಭಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ಎನ್.ಎಸ್.ಎಸ್ ಯೋಜನಾಧಿಕಾರಿ ರಾಜೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು, ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.