ಕುಂಜಿಬೆಟ್ಟು: ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಿದ್ದ 3 ದಿನಗಳ ವಿವಿ ಮಟ್ಟದ ಅಂತರ್ಕಾಲೇಜು ಚೆಸ್ ಪಂದ್ಯಾಟ ಗುಲಾಬಿ ಶಿವರಾಮ ನೋಂಡ ಪರ್ಯಾಯ ಟ್ರೋಫಿ ಸಮಾರೋಪಗೊಂಡಿತು.
ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನವನ್ನು ಪಡೆದು, ಗುಲಾಬಿ ಶಿವರಾಮ ನೋಂಡ ಪರ್ಯಾಯ ಟ್ರೋಫಿಗೆ ಭಾಜನವಾಯಿತು.
ಕ್ರಮವಾಗಿ ಎಸ್. ಡಿ. ಎಂ ಕಾಲೇಜ್ ಉಜಿರೆ, ವಿವೇಕಾನಂದ ಕಾಲೇಜು ಪುತ್ತೂರು, ಎಂ ಜಿ ಎಂ ಕಾಲೇಜ್ ಉಡುಪಿ ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನಿಯಾಗಿ ಹೊರಹೊಮ್ಮಿದವು. ಹಾಗೆಯೇ ಮಹಿಳೆಯರ ವಿಭಾಗದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪ್ರಥಮ ಸ್ಥಾನವನ್ನು ಪಡೆದು, ಕ್ರಮವಾಗಿ ಡಾ. ಪಿ.ದಯಾನಂದ ಪೈ ಪಿ. ಸತೀಶ್ ಪೈ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು, ಎಸ್.ಡಿ.ಎಂ ಕಾಲೇಜು ಉಜಿರೆ, ವಿವೇಕಾನಂದ ಕಾಲೇಜು ಪುತ್ತೂರು ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನಿಯಾಗಿ ಹೊರಹೊಮ್ಮಿದವು.
ಸಮಾರೋಪ ಸಮಾರಂಭದಲ್ಲಿ ತ್ರಿಭುಜ ಪೈಪ್ ಇಂಡಸ್ಟ್ರೀಸ್ ಪ್ರವರ್ತಕ ಶ್ರೀ ಹರೀಶ್ ಕುಂದರ್ ಬೈಕಾಡಿ ಮಾತನಾಡುತ್ತಾ, ಚೆಸ್ ಆಟದಿಂದ ಮಕ್ಕಳ ಮಾನಸಿಕ ವೃದ್ಧಿಯಾಗುತ್ತದೆ ಹಾಗೂ ಇಂದು ಪಂದ್ಯದಲ್ಲಿ ಸೋತವರು ಸೋಲೇ ಗೆಲುವಿನ ಮೆಟ್ಟಿಲು ಎಂದು ಅರಿತುಕೊಂಡು ನಿರಂತರ ಅಭ್ಯಾಸ ಮಾಡಬೇಕು ಎಂದು ಹೇಳಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಡೆರಿಕ್ ಚೆಸ್ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಶ್ರೀ ಪ್ರವೀಣ್ ರಾವ್, ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಮಂಗಳೂರು ವಿವಿಯಿಂದ ಆಯ್ಕೆಯಾದ ಚೆಸ್ ಪಂದ್ಯಾಟದ ಪರಿವೀಕ್ಷಕರಾದ ಶ್ರೀ ರವಿಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ಉಪನ್ಯಾಸಕಿ ಕು. ಇಂದಿರಾ ಸ್ವಾಗತಿಸಿದರು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಬಹುಮಾನ ವಿತರಣೆ ಪಟ್ಟಿಯನ್ನು ವಾಚಿಸಿ, ಧನ್ಯವಾದವಿತ್ತರು, ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಕಾರ್ಯಕ್ರಮ ನಿರೂಪಿಸಿದರು.