ಆಲಂಕಾರು, 15 ಡಿಸೆಂಬರ್ 2024: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಶ್ರೀ ದುರ್ಗಾಂಬಾ ಆಟದ ಮೈದಾನ ಆಲಂಕಾರಿನಲ್ಲಿ ನಡೆಯಿತು. ಈ ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ದಯಾನಂದ ರೈ ಮನವಳಿಕೆ ಅವರು ವಹಿಸಿದ್ದರು.
ಈ ವಾರ್ಷಿಕ ಕ್ರೀಡಾಕೂಟವನ್ನು ಖ್ಯಾತ ಯಟ್ಯೂಬರಾದ ವಿ. ಜೆ ವಿಖ್ಯಾತ್ ಅವರು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೆ ಅವಿರತವಾದ ಪರಿಶ್ರಮ ಅಗತ್ಯ. ಯಾವ ವ್ಯಕ್ತಿಯು ದಿನಬೆಳಗಾಗುವುದರೊಳಗೆ ಖ್ಯಾತಿ ಪಡೆಯಲು ಸಾಧ್ಯವಾಗುವುದಿಲ್ಲ ಅದರ ಹಿಂದೆ ಬಹಳ ಶ್ರಮವಿರುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯುವಾಗ ನಿಮಗೆ ವಿದ್ಯೆ ಕಲಿಸಿದ ಗುರುಗಳನ್ನು ಅವರ ತ್ಯಾಗವನ್ನು ಯಾವತ್ತೂ ಮರೆಯಬೇಡಿ ಎಂದು ಕಿವಿಮಾತು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯ ಯೂಟ್ಯೂಬರ್ ಆಗಿ ಅಪಾರ ಜನರ ಪ್ರೀತಿಗೆ ಪಾತ್ರರಾದ ವಿ. ಜೆ ವಿಖ್ಯಾತ್ ಅವರನ್ನು ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರಾಧಾಕೃಷ್ಣ ರೈ ಪರಾರಿ, ಲಯನ್ಸ್ ಕ್ಲಬ್ ಆಲಂಕಾರಿನ ಕಾರ್ಯದರ್ಶಿಗಳಾದ ನಿತ್ಯಾನಂದ ಶೆಟ್ಟಿ, ಮನವಳಿಕೆ, ಹಿಂದೂ ಮಜ್ದೂರ್ ಸಭಾ ದ ಆಲಂಕಾರು ಘಟಕದ ಅಧ್ಯಕ್ಷರಾದ ಜನಾರ್ದನ ಗೌಡ ಕಯ್ಯಪೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ರಾಮರಾಜ ನಗ್ರಿ, ದಯಾನಂದ ಗೌಡ ಆಲಡ್ಕ, ಆಡಳಿತ ಅಧಿಕಾರಿಗಳಾದ ಶ್ರೀಪತಿ ರಾವ್ ಎಚ್ ಮುಖ್ಯ ಗುರುಗಳಾದ ನವೀನ್ ರೈ ಪ್ರಾಂಶುಪಾಲರಾದ, ರೂಪಾ ಜೆ ರೈ, ಹಿರಿಯ ವಿದ್ಯಾರ್ಥಿಗಳಾದ ಮಹೇಶ್, ಹರೀಶ್ ಅವರು ಉಪಸ್ಥಿತರಿದ್ದರು.
ಆಲಂಕಾರಿನ ಉದ್ಯಮಿಗಳಾದ ರವಳನಾಥ ಪ್ರಭು ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ವಿದ್ಯಾ ಸಂಸ್ಥೆಯ ಪ್ರತಿಭಾನ್ವಿತ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಾದ ಮಧುಶ್ರೀ, ಹರ್ಷ, ಕಿಶನ್, ಶ್ರೇಯಸ್, ಯಶಸ್ವಿನಿ, ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಕೃತಿ,ಹರ್ಷ, ರೂಪಿಕ, ಧನ್ಯ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ರೂಪಾ ಜೆ ರೈ ಅವರು ಎಲ್ಲರನ್ನು ಸ್ವಾಗತಿಸಿದರು, ಆಂಗ್ಲಭಾಷಾ ಶಿಕ್ಷಕರಾದ ಜನಾರ್ಧನ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಂಸ್ಥೆಯ ಎಲ್ಲಾ ಭೋಧಕ, ಭೋಧಕೇತರ ವೃಂದದವರು ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೇಯಸ್ಸು ರೈ ಅವರ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯವಾಯಿತು.