ಕಣ್ಣಿನ ತಪಾಸಣೆಯಂತಹ ಶಿಬಿರಗಳು ಮಕ್ಕಳ ಶಿಕ್ಷಣಕ್ಕೆ ಸಹಕಾರಿ: ಲ. ಹರ್ಷರಾಜ್ ಶೆಟ್ಟಿ
ಶಿಮಂತೂರು, 21 ಆಗಸ್ಟ್ 2025: ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ಹಾಗೂ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಯಿತು.
“ಮಕ್ಕಳ ಆರೋಗ್ಯದಲ್ಲಿ ಕಣ್ಣುಗಳ ಆರೈಕೆ ಅತ್ಯಂತ ಪ್ರಮುಖ. ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಹಾಗೂ ಕಂಪ್ಯೂಟರ್ ಬಳಕೆ ಹೆಚ್ಚಿರುವುದರಿಂದ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಮೂಲ್ಕಿಯ ಅಧ್ಯಕ್ಷ ಲ. ಹರ್ಷರಾಜ್ ಶೆಟ್ಟಿ, ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಶಾರದಾ ಸೊಸೈಟಿ ಶಿಮಂತೂರ್ ಹಾಗೂ ಲಯನ್ಸ್ ಕ್ಲಬ್ ಮೂಲ್ಕಿ ಯಾವಾಗಲೂ ಮುಂಚೂಣಿಯಲ್ಲಿದೆ. ಕಣ್ಣಿನ ತಪಾಸಣೆಯಂತಹ ಶಿಬಿರಗಳು ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುತ್ತವೆ” ಎಂದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ಕಾರ್ಯಕ್ರಮ ಸಂಯೋಜಕರಾದ ಲ. ಉದಯ ಶೆಟ್ಟಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನಾ, ಎ. ಜೆ. ಮೆಡಿಕಲ್ ಸೈನ್ಸ್ ವಿಭಾಗದ ಡಾ. ತಮಿಧ್, ಶಾಲಾ ಪ್ರಾಚರ್ಯ ಜಿತೇಂದ್ರ ವಿ ರಾವ್, ಲಯನ್ಸ್ ಕ್ಲಬ್ ಮೂಲ್ಕಿಯ ಕೋಶಾಧಿಕಾರಿ ಲ. ಸುಶೀಲ್ ಬಂಗೇರ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ತಜ್ಞ ವೈದ್ಯರ ತಂಡವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರ ಕಣ್ಣುಗಳ ತಪಾಸಣೆ ನಡೆಸಿದರು. ಸುಮಾರು 315 ಜನರು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಕೆಲವು ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ದೃಷ್ಟಿ ದೋಷ ಪತ್ತೆಯಾಗಿ, ಅವರಿಗೆ ಮುಂದಿನ ಚಿಕಿತ್ಸೆ ಹಾಗೂ ಕನ್ನಡಕ ಬಳಕೆ ಬಗ್ಗೆ ಸಲಹೆ ನೀಡಲಾಯಿತು.
ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಲಯನ್ಸ್ ಕ್ಲಬ್ ಮೂಲ್ಕಿಯ ಲ. ಶೀತಲ್ ಸುಶೀಲ್ ವಂದಿಸಿದರು, ಸಹ ಶಿಕ್ಷಕಿ ದೀಪ ಕುಡ್ವ ಕಾರ್ಯಕ್ರಮ ನಿರೂಪಿಸಿದರು.