ನಾಯಕತ್ವ ಎಂಬುದು ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಭಾನುಮತಿ ಶೆಟ್ಟಿ
ಶಿಮಂತೂರು: ನೀತಿ, ಶಿಸ್ತು, ಸೇವಾ ಮನೋಭಾವನೆ ಮತ್ತು ನಾಯಕತ್ವ ಗುಣಗಳಿಂದ ವಿದ್ಯಾರ್ಥಿಗಳು ಭವಿಷ್ಯದ ಸಮರ್ಥ ನಾಯಕರಾಗಿ ಹೊರಹೊಮ್ಮಬೇಕು, ವಿದ್ಯಾರ್ಥಿಗಳು ಸಮಾಜದ ಮೇಲಿನ ಹೊಣೆಗಾರಿಕೆಯನ್ನು ಅರಿತು ಬೆಳೆದಾಗ ಮಾತ್ರ ನಿಜವಾದ ನಾಯಕತ್ವ ಪ್ರದರ್ಶಿಸಲು ಸಾಧ್ಯ. ನಾಯಕತ್ವ ಎಂಬುದು ಅಧಿಕಾರವಲ್ಲ, ಅದೊಂದು ಜವಾಬ್ದಾರಿ. ಶಾಲೆಯಂತಹ ಪವಿತ್ರ ಸ್ಥಳದಲ್ಲಿ ನಾಯಕತ್ವ ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಶ್ರೇಷ್ಠ ಸೇವೆ ಸಲ್ಲಿಸಬಲ್ಲರು ಎಂದು ಮೂಲ್ಕಿ ಕಕ್ವ ಗುತ್ತಿನ ಭಾನುಮತಿ ಶೆಟ್ಟಿ ಹೇಳಿದರು.

ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನ ಶೈಕ್ಷಣಿಕ ವರ್ಷ 2025 26ರ ಶಾಲಾ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆಯನ್ನು ಮಾಡಿ ಶುಭ ಹಾರೈಸಿದರು.
ಶಾಲಾ ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಅಧ್ಯಕ್ಷತೆ ವಹಿಸಿ, ಶಿಸ್ತು, ನಿಷ್ಠೆ, ಸಹಾನುಭೂತಿ ಮತ್ತು ಸಂವಹನ – ಇವು ಒಳ್ಳೆಯ ನಾಯಕರ ಗುಣಗಳು. ವಿದ್ಯಾರ್ಥಿಗಳು, ಇಂತಹ ಪ್ರಭಾವಶಾಲಿ ಗುಣ ವ್ಯಕ್ತಿತವನ್ನು ಬೆಳೆಸಬೇಕು, ವಿದ್ಯಾರ್ಥಿ ನಾಯಕರಾಗಲು ದೊಡ್ಡ ಹುದ್ದೆಯ ಅಗತ್ಯವಿಲ್ಲ ಒಂದು ಸತ್ಯ ಮಾತು, ಒಂದು ನೈಜ ಕೆಲಸ, ನಿಮ್ಮೊಳಗಿನ ಶಕ್ತಿ – ಇಷ್ಟೇ ಸಾಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರಿಗೆ ಹಾಗೂ ಉಪ ನಾಯಕರಿಗೆ ಬ್ಯಾಡ್ಜ್ ನೀಡಿ, ಪ್ರತಿಜ್ಞಾ ಯನ್ನು ಉಪ ಪ್ರಾಂಶುಪಾಲರಾದ ದಿವ್ಯ ಟಿ ಶೆಟ್ಟಿ ಬೋಧಿಸಿದರು.

ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಸುಮನ, ಶಾಲಾ ಚುನಾವಣಾ ಅಧಿಕಾರಿ ಸಹಶಿಕ್ಷಕಿ ಸಂಧ್ಯಾ, ಶಾಲಾ ವಿದ್ಯಾರ್ಥಿ ನಾಯಕ ಕೇಶವ ಭಟ್ ಹಾಗೂ ವಿವಿಧ ಸಂಘಗಳ ನಾಯಕರು ಹಾಗೂ ಉಪ ನಾಯಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಶಿಫಾ ಕಾರ್ಯಕ್ರಮ ನಿರೂಪಿಸಿದರು, ನಾಯಕಿ ಲೇಖನ ಸ್ವಾಗತಿಸಿದರು, ಉಪ ನಾಯಕಿ ನಿಶಾ ವಂದಿಸಿದರು.