ಪುತ್ತೂರು : ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತದ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣ ಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯ ವಾಕ್ಯಗಳನ್ನು ನಾವು ಕಾಣಬಹುದು ಎಂದು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸೋಮವಾರ ನಡೆದ ವಿಶ್ವ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಬೇರೆ ಬೇರೆ ದೇಶಗಳಲ್ಲಿ ಸಿಗುವ ಐತಿಹಾಸಿಕ ಸ್ಮಾರಕಗಳ ಕುರುಹಿನ ಮೂಲಕ ಹಿಂದೆ ಇಡೀ ವಿಶ್ವವೂ ಹಿಂದೂ ದೇಶವಾಗಿತ್ತೆಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಇಂತಹ ಕುರುಹುಗಳನ್ನು ನಾಶಮಾಡುವ ಕೆಲಸ ನಡೆಯುತ್ತಿದೆ. ರಕ್ಷೆಯಲ್ಲಿನ ಎಲ್ಲಾ ದಾರಗಳ ಒಗ್ಗೂಡುವಿಕೆಯು ಹೇಗೆ ಏಕತೆಯನ್ನು ಸೂಚಿಸುತ್ತದೆಯೋ ಅದರಂತೆ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಕ್ಷಣೆಯನ್ನು ಮಾಡಬೇಕು ಎಂದರು.
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಸಂಸ್ಕೃತ ಉಪನ್ಯಾಸಕಿ ಸಾರಿಕಾ ರಕ್ಷಾಬಂಧನಕ್ಕೆ ಸಂಬಂಧಿಸಿದ ಕಥೆಯೊಂದಿಗೆ ಅದರ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪ್ರಾಂಶುಪಾಲೆ ಮಾಲತಿ ಡಿ ರವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿ ಆಕರ್ಷ್ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಇಂಚರ ಎಸ್ ಮಯ್ಯ ಮತ್ತು ಹೃನ್ಮಯಿ ಪ್ರಾರ್ಥಿಸಿದರು.ಹಿತಾಲಿ ಪಿ ಶೆಟ್ಟಿ ಸ್ವಾಗತಿಸಿದರು. ಅದ್ವೆತ ಕೃಷ್ಣ ವಂದಿಸಿದರು. ನಿಯತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು .