ಕಿನ್ನಿಕಂಬಳ: ಇಲ್ಲಿಯ ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಥನಿ ಸಂಸ್ಥಾಪಕ ರೆವರೆಂಡ್ ಫ್ರಾನ್ಸಿಸ್ ಕಮ್ಮಿಲಸ್ ಮಸ್ಕರೇನ್ಹಸ್ ರವರು ಸ್ಥಾಪಿಸಿದ ಬೆಥನಿ ಸಂಸ್ಥೆಯ 105ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಭ.ಅನಿತಾ ಲಿಡಿಯಾ ಮಾತನಾಡುತ್ತಾ, ಬೆಥನಿ ಸಂಸ್ಥಾಪಕ ರೇಮಂಡರು ನೀಡಿದ ಸೇವೆ ಅವಿಸ್ಮರಣೀಯ.ಇವರ ಸೇವಾ ಮನೋಭಾವ, ಶ್ರೇಷ್ಠತೆಯು ಅವರು ಸ್ಥಾಪಿಸಿದ ಬೆಥನಿ ಸಂಸ್ಥೆಯ ಪ್ರಭಾವವನ್ನು ಎತ್ತಿ ಹಿಡಿಯುತ್ತದೆ ಎಂದು ಸಂಸ್ಥೆಯ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾದ ಭ.ಜೆಸ್ಸಿ ಕ್ರಾಸ್ತಾ ಸಭೆಯನ್ನು ಉದ್ದೇಶಿಸಿ, ಬೆಥನಿ ಸಂಸ್ಥೆ ತನ್ನ ಸಾಮಾಜಿಕ ಸೇವೆಯಿಂದ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ.ನಾವೆಲ್ಲರೂ ಈ ಸಂಸ್ಥೆಯೊಂದಿಗೆ ಅದ್ಭುತವಾದ ಪ್ರಯಾಣವನ್ನು ಹೊಂದಿದ್ದೇವೆ.ಇಲ್ಲಿ ವಿದ್ಯಾರ್ಜನೆ ಮಾಡುವ ನಿಮ್ಮ ಆಶಯಗಳು ಎತ್ತರವಾಗಿರಲಿ, ನಿಮ್ಮ ಪ್ರಯತ್ನಕ್ಕೆ ಆಕಾಶವೇ ಗಡಿ ಎಂದು ಶುಭ ಹಾರೈಸಿದರು.
ಉಪನ್ಯಾಸಕಿ ಈಶಾ ಡಿಸೋಜ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ಅಯಿಮನ್ ರಿಮಾಶ್ ನೆರೆದಿರುವ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿಯಾಫ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು, ಮಾಶಿತ ವಂದಿಸಿದರು.