ಕಡಬ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಪದವಿಪೂರ್ವ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ನಡೆಯಿತು. ಇದರ ಉದ್ಘಾಟನೆಯನ್ನು ನೆರವೇರಿಸಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮತ್ತು ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಶ್ರೀ ದೇವಿಪ್ರಸಾದ್ ನೀರಾಜೆ ಇವರು ಮಾತನಾಡುತ್ತಾ “ಯುವ ಜನರಿಗಾಗಿ ನಡೆಯುತ್ತಿರುವ ಈ ಪಂದ್ಯಾಟವು ಉತ್ತಮ ರೀತಿಯಲ್ಲಿ ನಡೆಯುವಂತಾಗಲಿ. ಆ ಮೂಲಕ ಉತ್ತಮ ಕ್ರೀಡಾಪಟುಗಳು ಸಮಾಜದಲ್ಲಿ ಮೂಡಿಬರುವಂತಾಗಲಿ” ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ವಾಲಿಬಾಲ್ ನಾಯಕನಾದ ಶ್ರೀ ಫಲೂಲುದ್ದಿನ್ ಹೇಂತಾರ್ ಮಾತನಾಡುತ್ತಾ “ವಿವಿಧ ಆಟೊಟಗಳು, ಪಂದ್ಯಾವಳಿಗಳು ವಿದ್ಯಾರ್ಥಿಗಳಲ್ಲಿ ತಂಡನಿರ್ವಹಣೆ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆಯಾದಿ ಅನೇಕ ಉತ್ತಮ ಗುಣಗಳನ್ನು ಬೆಳೆಸುತ್ತದೆ. ಇದು ಅವರ ಭವಿಷ್ಯದ ಔದ್ಯೋಗಿಕ ಜೀವನಕ್ಕೂ ತುಂಬಾನೇ ಮುಖ್ಯವಾಗುತ್ತದೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಮುನ್ನಡೆಯುವುದು ನಾವೆಲ್ಲರೂ ಮಾಡಬೇಕಾದ ಅಗತ್ಯ ಕಾರ್ಯ. ಎಲ್ಲಾ ಆಟಗಾರರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯಶಸ್ಸನ್ನು ಕಾಣುವಂತಾಗಲಿ” ಎಂದು ಹಿತ ನುಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕೊಯಿಲ ಮತ್ತು ಕಡಬ ತಾಲೂಕಿನ ಕ್ರೀಡ ಸಂಯೋಜಕರಾದ ಶ್ರೀ ಮಹಮ್ಮದ್ ಹ್ಯಾರಿಸ್ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಲಕ್ಷ್ಮೀನಾರಾಯಣರಾವ್ ಆತೂರು ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತ ಭಾಷಣವನ್ನು ಮಾಡಿದರು. ವಿದ್ಯಾರ್ಥಿನಿ ಕಶ್ವಿ ರೈ ಧನ್ಯವಾದ ಸಮರ್ಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ಗಣೇಶ್ ಕೆ ಸಹಕರಿಸಿದರು. ವಿದ್ಯಾರ್ಥಿನಿಯರಾದ ನಿಶ್ಮಾ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.