ಪುತ್ತೂರು : ನಟ್ಟೋಜ ಫೌoಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನ ಹಾಗೂ ಸಂಸ್ಕೃತೋತ್ಸವ ದಿನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಾಗ್ಮಿ ಗಣರಾಜ ಭಟ್ ಕೆದಿಲ ಇವರು ರಕ್ಷಾ ಬಂಧನದ ಮಹತ್ವ ಹೇಳಿದರು.
ಸಹೋದರತೆಯನ್ನು ಪ್ರಪಂಚಕ್ಕೆ ಸಾರಿದ ದೇಶ ಭಾರತ. ಶ್ರೀ ಕೃಷ್ಣ ಪರಮಾತ್ಮನಿಂದಾಗಿ ರಕ್ಷಾಬಂಧನ ಪ್ರಾರಂಭವಾಯಿತು. ಹುಡುಗಿಯರನ್ನು ಸಹೋದರಿಯರು ಎಂದು ಭಾವಿಸುವ ಗುಣ ಭಾರತೀಯರಲ್ಲಿದೆ. ರಕ್ಷಾ ಬಂಧನ ಎನ್ನುವುದು ಕೇವಲ ಸೋದರಿಯರ ರಕ್ಷಣೆಗಷ್ಟೇ ಸೀಮಿತವಾಗದೆ ದೇಶ ರಕ್ಷಣೆ, ಧರ್ಮ ರಕ್ಷಣೆ, ಸಂಸ್ಕೃತಿ, ಸಂಸ್ಕಾರದ ರಕ್ಷಣೆಗೂ ಹೇತುವಾಗಬೇಕು. ವಿಕೃತ ಆಚರಣೆಗಳನ್ನು, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಗಳನ್ನು ಬಿಟ್ಟು ಭಾವನೆಗಳನ್ನು ಬೆಸೆಯುವ ರಕ್ಷಾಬಂಧನದಂತಹ ಆಚರಣೆಗಳೆಡೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಧರ್ಮವನ್ನು ವಿಭಜಿಸುವ ಅಗೋಚರ ಶಕ್ತಿಗಳಿವೆ. ಹಿಂದೂಗಳು, ಜೈನರು, ಲಿಂಗಾಯತರು ನಂಬುವ ದೇವರುಗಳು ಒಂದೇ. ಆದುದರಿಂದ ಧರ್ಮ ವಿಭಜನೆಯ ಮಾತೇ ಇಲ್ಲ. ಏಕತೆಯಿಂದ ಧರ್ಮ ರಕ್ಷಣೆ ಮಾಡಬೇಕು. ರಕ್ಷೆ ಭ್ರಾತೃತ್ವವನ್ನು ಬೆಸೆಯುವ ಸಾಧನ. ಎಲ್ಲರನ್ನು ಒಂದುಗೂಡಿಸುವ ದಾರಿ ಎಂದರು. ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರತಿ ಸಾಲಿನಲ್ಲಿ ಕುಳಿತು ವಿದ್ಯಾರ್ಥಿ ಸಹೋದರರಿಗೆ ವಿದ್ಯಾರ್ಥಿನಿಯರು ರಕ್ಷೆ ಕಟ್ಟಿದರು. ವಿದ್ಯಾರ್ಥಿನಿಯರಾದ ಅರುಂಧತಿ ಮತ್ತು ಅಪೂರ್ವ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಪವನ್ ಭಾರದ್ವಾಜ ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಷಿನಿ ಆಳ್ವ ವಂದಿಸಿದರು. ವಿದ್ಯಾರ್ಥಿ ಶುಭನ್ ಶೆಣೈ ನಿರೂಪಿಸಿದರು.