ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿ ಸ್ವೋಜಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ್ದಾನೆ. ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಪುಸ್ತಕಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಕಲಿಸುವಾಗ ಎ ಫಾರ್ ಆಪಲ್ ಎಂದೇ ಶುರು ಮಾಡುವುದು ವಾಡಿಕೆಯಾಗಿ ನಡೆದುಬಂದಿದೆ. ಆದರೆ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿ ಸ್ವೋಜಸ್ ಇಂಗ್ಲಿಷ್ ಅಕ್ಷರಗಳಿಗೆ ಭಾರತೀಯ ಶ್ರೇಷ್ಟ ಪುರುಷರ, ವನಿತೆಯರ, ಭಾರತೀಯ ಹೆಮ್ಮೆಯ ಸೈನ್ಯದ ಹೆಸರನ್ನು ಜೋಡಿಸಿ ನೂತನ ಪಠ್ಯಕ್ರಮವನ್ನು ಸಾಧಿಸಿತೋರಿಸಿದ್ದಾನೆ. ಮಾತ್ರವಲ್ಲದೆ ಆ ವೀರಪುರುಷರ ಹೆಸರಿನೊಂದಿಗೆ ಅವರ ಸಾಹಸಗಾಥೆಯನ್ನೂ ಒಂದೇ ವಾಕ್ಯದಲ್ಲಿ ವಿವರಿಸುವ ಮೂಲಕ ಅವರ ಕಿರುಪರಿಚಯವನ್ನೂ ಮಾಡಿಕೊಟ್ಟಿರುವುದು ಸ್ವೋಜಸ್ ವಿಶೇಷತೆ.
ಸ್ವೋಜಸ್ ಕಲಿಸಿಕೊಡುತ್ತಿರುವ ಎ ಯಿಂದ ಝೆಡ್ ವರೆಗಿನ ಅಕ್ಷರಗಳು ಸಾಕಷ್ಟು ಆಸಕ್ತಿದಾಯಕವಾಗಿವೆ. ಎ ಫಾರ್ ನೆಲದಲ್ಲೂ ಜಲದಲ್ಲೂ ಧ್ವಜವನ್ನು ಹಾರಿಸಿದ ಉಳ್ಳಾಲದ ರಾಣಿ ‘ ಅಬ್ಬಕ್ಕ’, ಬಿ ಫಾರ್ ಇನ್ಕ್ವಿಲಾಬ್ ಜಿಂದಾಬಾದ್ ಘೊಷಣೆಯೊಂದಿಗೆ ಮನಗಳಲ್ಲಿ ಕ್ರಾಂತಿಬೀಜ ಬಿತ್ತಿದ ಸರದಾರ ‘ಭಗತ್ ಸಿಂಗ್’, ಸಿ ಫಾರ್ ಮೆ ಆಜಾದ್ ಹೂ ಎಂದು ಘರ್ಜಿಸಿದ ‘ಚಂದ್ರಶೇಖರ ಆಝಾದ್’, ಡಿ ಫಾರ್ ಆರ್ಯ ಸಮಾಜದ ಮುಖಂಡ ಸ್ವಾಮಿ ‘ದಯಾನಂದ ಸರಸ್ವತಿ’ ಹೀಗೆ ಪ್ರತಿಯೊಂದು ಅಕ್ಷರಕ್ಕೂ ಭಾರತೀಯ ಮಹಾನ್ ವ್ಯಕ್ತಿಗಳ ಸಾಧನೆಯೊಂದಿಗೆ ಹೆಸರನ್ನು ಜೋಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಸ್ವೋಜಸ್ ಪುತ್ತೂರಿನ ಸಾಲ್ಮರ ನಿವಾಸಿಗಳಾದ ಸಂತೋಷ್ ಎನ್ ಹಾಗೂ ಶೃತಿ ಎಸ್ ದಂಪತಿ ಪುತ್ರ. ‘ಅಂಬಿಕಾ ವಿದ್ಯಾಲಯದಲ್ಲಿ ದೇಶಕ್ಕಾಗಿ ಹೋರಾಡಿದವರ ಬಗೆಗೆ ಹೇಳಿಕೊಡುತ್ತಾರೆ. ಹಾಗೆಯೇ ಸ್ವಾತಂತ್ರ್ಯ. ಹೋರಾಟಗಾರರ ಹೆಸರನ್ನು ಅಮ್ಮ ಹೇಳಿಕೊಟ್ಟಿದ್ದಾರೆ. ನಿರಂತರ ಪ್ರಯತ್ನದ ಫಲವಾಗಿ ಹೇಳುವುದಕ್ಕೆ ಸಾಧ್ಯವಾಯಿತು ವೀಡಿಯೋ ನೋಡಿದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎನ್ನುವುದು ಸ್ವೋಜಸ್ ಮಾತು.
ಸ್ವೋಜಸ್ ರೂಪಿಸಿದ ನೂತನ ಎಬಿಸಿಡಿ ಕಲಿಕೆಗೆ ಅನೇಕರಿಂದ ಶ್ಲಾಘನೆ, ಬೇಡಿಕೆಗಳು ಬಂದಿವೆ. ಬೇರೆ ಶಾಲೆಯ ವಿದ್ಯಾರ್ಥಿಗಳ ಹೆತ್ತವರೂ ಸ್ವೋಜಸ್ ರೂಪಿಸಿದ ಪಠ್ಯಕ್ರಮವನ್ನು ಕೇಳಿ ಪಡೆಯುತ್ತಿದ್ದಾರೆ. ಕೇವಲ ಪಠ್ಯವಷ್ಟೇ ಅಲ್ಲದೆ, ಮಕ್ಕಳಲ್ಲಿ ದೇಶದ ಬಗೆಗೆ ಜಾಗೃತಿ ಮೂಡಿಸುವಲ್ಲಿಯೂ ಸ್ವೋಜಸ್ ಕಾರ್ಯ ಶ್ಲಾಘನೀಯವೆನಿಸಿದೆ.