ಪುತ್ತೂರು, ಆಗಸ್ಟ್ 26 2024: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ಸಿ ಬಿ ಎಸ್ ಇ ವಿದ್ಯಾಲಯ, ಬಪ್ಪಳಿಗೆಯಲ್ಲಿ ಹಬ್ಬದ ಆಚರಣೆಯ ಹಿನ್ನೆಲೆ ಹಾಗೂ ಮಹತ್ವವನ್ನು ಸಾರುವ ಸಲುವಾಗಿ ,ಭಕ್ತಿ ಸಿಂಚನ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳಿಗೆ ವೇದಿಕೆಯನ್ನ ಕಲ್ಪಿಸಲಾಗಿತ್ತು. ಭಗವಧ್ಗೀತೆಯ ಪ್ರಥಮ ಅಧ್ಯಾಯದ ಪಠಣದೊಂದಿಗೆ ಆರಂಭವಾಗಿ, ಭಜನೆ ಹಾಡು- ಕುಣಿತ ಭಜನೆಯೊಂದಿಗೆ ಮುಂದುವರೆದು, ಶ್ರೀಕೃಷ್ಣ ಅಲಂಕೃತ ವೇದಿಕೆಯಲ್ಲಿ ನಂದಗೋಕುಲವನ್ನ ಸೃಷ್ಟಿಸಿದ್ದ ಮುದ್ದು ಕೃಷ್ಣ, ಮುದ್ದು ರಾಧೆಯರಿಗೆ ಆರತಿ ಬೆಳಗಿ ,ತಿಲಕವಿಟ್ಟು ಶುಭ ಹಾರೈಸಿ ಹರಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕೃಷ್ಣನ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆ,ರಸಪ್ರಶ್ನೆ ಸ್ಪರ್ಧೆ,ಕಿರೀಟ ತಯಾರಿ, ಮಡಕೆ ಚಿತ್ರಕಲೆ, ಹಾಗೂ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಸಿಹಿ ಹಂಚಿ ಬಹು ಅರ್ಥಪೂರ್ಣ ರೀತಿಯಲ್ಲಿ ಗೋಕುಲಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಕು ಮಾಲತಿ ಡಿ, ಹಾಗೂ ಉಪ ಪ್ರಾಂಶುಪಾಲೆಯಾದ ಶ್ರೀಮತಿ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. 10ನೇ ತರಗತಿಯ ಹಿತಾಲಿ ಪಿ ಶೆಟ್ಟಿ ಹಾಗೂ ಆದ್ಯ ಎಂ ಎ ಕಾರ್ಯಕ್ರಮ ನಿರೂಪಿಸಿದರು.