ಪುತ್ತೂರು, ಆಗಸ್ಟ್ 15, 2024 : ಭಾರತದ ಇತಿಹಾಸವನ್ನು ತಿರುಚಿದ್ದು ಇನ್ಯಾರೋ ಅಲ್ಲ, ಭಾರತೀಯರೇ ಅನ್ನುವುದು ದುರಂತ. ಸ್ವಾತಂತ್ರದ್ಯ ನಂತರದ ಭಾರತದಲ್ಲಿ ನಿಜ ಇತಿಹಾಸವನ್ನು ದಾಖಲಿಸುವವರನ್ನು ಮೂಲೆಗುಂಪು ಮಾಡಿ ಮಿಥ್ಯ ಇತಿಹಾಸವನ್ನೇ ಸತ್ಯವೆಂದು ನಂಬಿಸಲಾಯಿತು. ಇದರ ಪರಿಣಾಮ ದೇಶಕ್ಕಾಗಿ ಹೋರಾಡಿದ ನೈಜ ರಾಷ್ಟ್ರ ಭಕ್ತರ ಪರಿಚಯ ಈಗಿನ ತಲೆಮಾರಿಗೆ ಇಲ್ಲದಾಗಿದೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ನಮ್ಮ ಹಿರಿಯರ ತ್ಯಾಗ ಬಲಿದಾನಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಸ್ವಾತಂತ್ರö್ಯದ ಆಚರಣೆಗೆ ಮಹತ್ವ ಬರುವುದಕ್ಕೆ ಸಾಧ್ಯವಿಲ್ಲ. ನಮ್ಮ ಅಜ್ಜ, ಮುತ್ತಜ್ಜಂದಿರು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡದ್ದನ್ನು ಪ್ರತಿಯೊಬ್ಬರೂ ತಿಳಿದುಕೊಂಡಾಗ ಆಚರಣೆ ಅರ್ಥಪೂರ್ಣವಾಗುವುದಕ್ಕೆ ಸಾಧ್ಯ. ಕೇವಲ ಶಾಂತಿಯಿಂದಷ್ಟೇ ಸ್ವಾತಂತ್ರ್ಯ ದೊರಕಿದ್ದಲ್ಲ, ರಕ್ತತರ್ಪಣವೇ ಈ ನೆಲದಲ್ಲಾಗಿದೆ. ಆದರೆ ಆ ಕುರಿತಾದ ಅತ್ಯಂತ ಕನಿಷ್ಟ ಮಾಹಿತಿಯಷ್ಟೇ ಈ ತಲೆಮಾರಿಗಿದೆ ಎಂದು ನುಡಿದರು.


ಸ್ವಾತಂತ್ರ್ಯಕ್ಕಾಗಿ ನಿಜವಾಗಿ ಅರ್ಪಿಸಿಕೊಂಡವರು ಬೇರೆ, ಆಮೇಲೆ ಅಧಿಕಾರ ಅನುಭವಿಸಿದವರೇ ಬೇರೆ. ವಯಸ್ಸಿನ ಹಂಗು ಮೀರಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅವೆಷ್ಟೋ ವೀರಪುರುಷರ, ವೀರ ವನಿತೆಯರ ಸಾಹಸಗಾಥೆಗಳು ಈ ನೆಲದಲ್ಲಿದೆ. ದೇಶದ ಒಂದೊಂದು ಭಾಗದಿಂದಲೂ ಅಸಂಖ್ಯ ವೀರ ಪುತ್ರರು ದೇಶಕ್ಕಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಅಂತಹವರ ಬಗೆಗೆ ಅರಿಯದೆ ಆಚರಿಸುವ ಸ್ವಾತಂತ್ರ್ಯ ದಿನಕ್ಕೆ ಮೌಲ್ಯವಿಲ್ಲ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಧುರೀಣ ಮೊಗೆರೋಡಿ ಬಾಲಕೃಷ್ಣ ರೈ ಮಾತನಾಡಿ ಮನುಷ್ಯನ ಆತ್ಮಸಾಕ್ಷಿ ಸರಿ ಇರಬೇಕು. ಆತ್ಮ ಪರಮಾತ್ಮನೊಂದಿಗಿನ ಸಂಬಂಧ ಹೊಂದಿದೆ. ಹೇಗೆ ಹೂವೊಂದನ್ನು ನೋಡದೆ ಕೇವಲ ಪರಿಮಳದ ಮೂಲಕ ಗುರುತಿಸಬಹುದೋ ಹಾಗೆಯೇ ವ್ಯಕ್ತಿಯ ನಡೆನುಡಿಗಳಿಂದ ವ್ಯಕ್ತಿತ್ವವನ್ನು ಗುರುತಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಆಗೊಮ್ಮೆ ಈಗೊಮ್ಮೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಹಿಂದೂ ದೇವತೆಗಳ ವಿಗ್ರಹ, ಹಿಂದೂ ಆರಾಧನಾ ಸಂಗತಿಗಳು ಕಂಡುಬರುತ್ತಿರುವುದನ್ನು ಪತ್ರಿಕೆಗಳಲ್ಲಿ ಗಮನಿಸಬಹುದು. ಇದರರ್ಥ ಯಾವುದೋ ಒಂದು ಕಾಲದಲ್ಲಿ ಇಡಿಯ ವಿಶ್ವವೇ ಭಾರತವಾಗಿತ್ತು ಎಂಬುದೇ ಆಗಿದೆ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಂಬಿಕಾ ವಿದ್ಯಾಸಂಸ್ಥೆಗಳಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ವಂದಿಸಿದರು. ವಿದ್ಯಾರ್ಥಿನಿ ರಿಶಾಲಿ ಕಾರ್ಯಕ್ರಮ ನಿರ್ವಹಿಸಿದರು.


ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಕ್ಯಾಂಪಸ್‌ನಿಂದ ಹಾಗೂ ಬಪ್ಪಳಿಗೆ ಅಂಬಿಕಾ ಕ್ಯಾಂಪಸ್ ನಿಂದ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಗೆ ವೈಭವದ ಮೆರವಣಿಗೆ ನಡೆಯಿತು. ಸಹಾಯಕ ಆಯುಕ್ತರ ಭಾಷಣದ ತರುವಾಯ ಮರಳಿ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ಗೆ ಮೆರವಣಿಗೆ ಮರಳಿತು. ಮೆರವಣಿಗೆಗೂ ಮುನ್ನ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿ ಧ್ವಜಾರೋಹಣ ಹಾಗೂ ಧ್ವಜವಂದನೆ ನಡೆಯಿತು

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…