ಕೃಷ್ಣಾಪುರ, ಸಪ್ಟೆಂಬರ್ 9, 2024: ‘ ವಿದ್ಯಾರ್ಥಿಗಳಲ್ಲಿ ಶಿಸ್ತು ಬದ್ಧತೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದೇ ಸ್ಕೌಟ್ಸ್ & ಗೈಡ್ಸ್ ನ ಮೂಲ ತತ್ತ್ವ.ಈ ನಿಟ್ಟಿನಲ್ಲಿ ತನ್ನನ್ನು ನಿರಂತರ ಸಮರ್ಪಿಸಿ ತನ್ಮೂಲಕ ಸಂಸ್ಥೆಯ ಅತ್ಯುನ್ನತ ಪದವಿಯಾದ ಹಿಮಾಲಯ ವೃಕ್ಷಮಣಿ ಪದವಿಯನ್ನು ಪಡೆದ ಸಾಧಕ ರವಿಚಂದ್ರ ನಿಜಕ್ಕೂ ಅಭಿನಂದನಾರ್ಹರು ‘ ಎಂದು ಭಾರತ್ ಸ್ಕೌಟ್ಸ್ & ಗೈಡ್ಸ್ ನ ಜಿಲ್ಲಾ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು.
ಅವರು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಸಂಸ್ಥೆಯ ಡಾ ಎ ಪಿ ಜೆ ಅಬ್ದುಲ್ ಕಲಾಂ ರೋವರ್ಸ್ ಘಟಕದ ನೋಡಲ್ ಅಧಿಕಾರಿ ಹಾಗೂ ರಂಗ ನಟ, ನಿರ್ದೇಶಕ ರವಿಚಂದ್ರ ಭಂಡಾರಿಯವರು ಭಾರತ್ ಸ್ಕೌಟ್ಸ್ & ಗೈಡ್ಸ್ ನ ಅತ್ಯುನ್ನತ ಹಂತವಾದ ಹಿಮಾಲಯ ವೃಕ್ಷಮಣಿ ಪದವಿಯನ್ನು ಪಡೆದ ಹಾಗೂ ತಮಿಳುನಾಡಿನ ಸ್ಟಾರ್ ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ರಿಸರ್ಚ್ ಎಂಡ್ ಎಜುಕೇಶನ್ ಸಂಸ್ಥೆ , ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ , ಶೈಕ್ಷಣಿಕ ಕಾರ್ಯಕ್ಷಮತೆ, ಸಮುದಾಯ ಸೇವೆಗಳು, ಸಂಶೋಧನೆ ಮತ್ತು ಬೋಧನೆಯಲ್ಲಿನ ಕಾರ್ಯಕ್ಷಮತೆಗಾಗಿ ಕೊಡಮಾಡುವ ಎಸ್ಐಎಫ್ಆರ್ ಐ ಇಂಟರ್ನ್ಯಾಷನಲ್ ಬೆಸ್ಟ್ ಟೀಚರ್ ಅವಾರ್ಡ್- 2024 ನ್ನು ಪಡೆದ ನಿಮಿತ್ತ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲೆ ಅನುಸೂಯ ಕೆ ಪಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮಹಾ ನಗರಪಾಲಿಕೆ ಸದಸ್ಯೆ ಸಂಶದ್ ಅಬೂಬಕ್ಕರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ ಎಸ್ ಶರೀಫ್, ಅಬ್ದುಲ್ ಅಮೀರ್, ಶರೀಫ್, ಹಿರಿಯ ಉಪನ್ಯಾಸಕರಾದ ವೀರೇಶ್ ಬೇಕಲ್,ನೂರ್ ಮಹಮ್ಮದ್,ಪ್ರಮೀಳಾ ಕುಟಿನ್ಹಾ, ಪೂರ್ಣಿಮಾ ಕಾಮತ್, ವಾಣಿ ಕುಮಾರಿ, ಡಾ ಪ್ರತಿಮಾ ಭಟ್, ಮಮತಾ ಎಚ್, ಶಾಂತಲಾ ಟಿ ಉಪಸ್ಥಿತರಿದ್ದರು.
ಗಣಿತ ಶಾಸ್ತ್ರ ಉಪನ್ಯಾಸಕ ಸುಧೀರ್ ಸನ್ಮಾನ ಪತ್ರ ವಾಚಿಸಿದರು.ಆಯಿಷಾ ವಸೀಲಾ ಸ್ವಾಗತಿಸಿ, ನಾಝಿಯಾ ವಂದಿಸಿದರು. ಅಪೇಕ್ಷಾ ಕಾರ್ಯಕ್ರಮ ನಿರ್ವಹಿಸಿದರು.