ಕೊಕ್ರಾಡಿ, ಆಗಸ್ಟ್ 17, 2024 : ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಕ್ರಾಡಿ ಮತ್ತು ಲಯನ್ಸ್ ಕ್ಲಬ್ ಮೂಡುಬಿದಿರೆ ಇವರ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಮತ್ತು ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಮಾದಕ ವಸ್ತುಗಳ ದುಷ್ಪರಿಣಾಮದ ಅರಿವು ಮೂಡಿಸಿ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳಿಸುವುದಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೇಣೂರು ಆರಕ್ಷಕ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶ್ರೀ ಕೃಷ್ಣ ಮತ್ತು ಆರಕ್ಷಕರಾದ ಶ್ರೀಮತಿ ಲತಾ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಅವರು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಮತ್ತು ಮಾದಕ ವ್ಯಸನದ ಅಪಾಯಗಳ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ಒದಗಿಸಿದರು. ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳ ತಿಳಿಸಿದರು.

ಲಯನ್ಸ್ ಕ್ಲಬ್‌ನ ಸದಸ್ಯ ಹಾಗೂ ಮಾಜಿ ಸೈನಿಕರಾದ ಶ್ರೀ ನವಾನಂದ ಅವರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ಯುವಜನರಲ್ಲಿ ಜಾಗರೂಕತೆ ಮತ್ತು ಜವಾಬ್ದಾರಿಯ ಅಗತ್ಯವನ್ನು ಒತ್ತಿ ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಥೋಮಸ್ ನೊರನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ನೋರ್ಬರ್ಟ್ ಮಾರ್ಟಿಸ್ ಅವರು ವಹಿಸಿದ್ದರು, ಅವರು ಮಾದಕ ವ್ಯಸನ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಶಿಕ್ಷಣದ ಪಾತ್ರವನ್ನು ಒತ್ತಿ ಹೇಳಿದರು.

ಉಪನ್ಯಾಸಕ ಲಯನ್ ಶ್ರೀ ದಯಾನಂದ ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕುಮಾರಿ ರಶ್ಮಿಯವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸನೀಕ ಅವರು ನಿರ್ವಹಿಸಿದರು. ಕಾರ್ಯಕ್ರಮವು ಸುಗಮವಾಗಿ ನಡೆಯಿತು.ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ ಮತ್ತು ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಆಳವಾದ ತಿಳುವಳಿಕೆ ಪಡೆದರು.