“ರಾಜಕೇಸರಿ ಸ್ವಚ್ಛಾಲಯ ಅಭಿಯಾನ”ದ ಸ್ವಯಂಸೇವಕರಿಗೆ ಸನ್ಮಾನ.
ಕುಳಾಯಿ, 21 ಮಾರ್ಚ್ 2025: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ಮತ್ತು ರಾಹುಲ್ ಮೆಮೋರಿಯಲ್ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ “ರಾಜಕೇಸರಿ ಸ್ವಚ್ಛಾಲಯ ಅಭಿಯಾನ” ದಡಿ ಇತ್ತೀಚೆಗೆ ಕುಳಾಯಿ ಫಿಶರೀಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸಲಾಯಿತು.

ವಿಶ್ವ ಸಂತೋಷ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಮಕ್ಕಳು, ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗಣ್ಯರ ಸಮಕ್ಷಮದಲ್ಲಿ ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡ ರಾಜಕೇಸರಿ ಸಂಸ್ಥೆಯ ಸ್ವಯಂಸೇವಕರ ಸೇವೆಯನ್ನು ಗುರುತಿಸಿ ಬಹಳ ಗೌರವಾದರಗಳಿಂದ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದಾಸ್ ಕಾಲೇಜ್ ಸುರತ್ಕಲ್ ಇದರ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ, ಪಣಂಬೂರು ಮೊಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀ ಮಾಧವ ಸುವರ್ಣ, ಕೂಳೂರು ಮೊಗವೀರ ಮಹಾಸಭಾ ಸಂಘದ ಅಧ್ಯಕ್ಷ ಶ್ರೀ ಭರತ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ವಚ್ಛಾಲಯ ಅಭಿಯಾನದ ಬಗ್ಗೆ ಮತ್ತು ಸ್ವಯಂಸೇವಕರ ಸೇವೆಯ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಾಲಾ ಸಹ ಶಿಕ್ಷಕಿ ಶ್ರೀಮತಿ ಸಿಂತಿಯಾ ಧನ್ಯವಾದ ಸಮರ್ಪಿಸಿದರು.