ಮಂಗಳೂರು, ಡಿಸೆಂಬರ್ 23, 2025: ಯುವ ಸಮುದಾಯದ ಭವಿಷ್ಯ, ಆರೋಗ್ಯ ಮತ್ತು ಸಾಮರ್ಥ್ಯವನ್ನು ಕಾಪಾಡುವ ಉದ್ದೇಶದಿಂದ ವಿನಾಶಕಾರಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿ “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ” ರಾಜ್ಯವ್ಯಾಪಿ ಸ್ತಬ್ಧಚಿತ್ರ ರಥಯಾತ್ರೆ ಆರಂಭಗೊಳ್ಳಲಿದೆ. ಈ ಕುರಿತು ಅಗತ್ಯ ಮಾಹಿತಿಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್, ಮಂಗಳೂರು (ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿತ), ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ಪರಿವರ್ತನಾ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ಉದ್ಘಾಟನೆಯಾದ ನಂತರ 45 ದಿನಗಳ ಕಾಲ 18 ಜಿಲ್ಲೆಗಳು ಹಾಗೂ ಬೆಂಗಳೂರು ಮಹಾನಗರದಲ್ಲಿ ರಥಯಾತ್ರೆ ಸಂಚರಿಸಿ ವಿವಿಧ ನಗರ–ಪಟ್ಟಣಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಮಂಗಳೂರಿಗೆ ಡಿಸೆಂಬರ್ 25, 2025 (ಗುರುವಾರ) ಬೆಳಗ್ಗೆ 9.00 ಗಂಟೆಗೆ ಸ್ತಬ್ಧಚಿತ್ರ ಹೊತ್ತ ರಥ ಆಗಮಿಸಲಿದೆ. ಮಂಗಳೂರಿನಲ್ಲಿ ಡಿಸೆಂಬರ್ 25, 26 ಮತ್ತು 27ರಂದು ನಗರದ ಆಯ್ದ ಕೇಂದ್ರಗಳು ಹಾಗೂ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಅಂತಿಮ ಸಮಾರೋಪ ಕಾರ್ಯಕ್ರಮವು ಜನವರಿ 19, 2026ರಂದು ಬೆಂಗಳೂರಿನಲ್ಲಿ ನಡೆಯಲಿದೆ.ರಥಯಾತ್ರೆಯ ಉದ್ದೇಶಗಳು ಯುವಕರಲ್ಲಿ ಮಾದಕ ವ್ಯಸನದ ಅಪಾಯಗಳ ಕುರಿತು ನೈಜ ಅರಿವು ಮೂಡಿಸುವುದು, ಮಾದಕ ವಸ್ತುಗಳ ಬಳಕೆ–ಮಾರಾಟ ಹಾಗೂ ಸಂಬಂಧಿತ ಅಪರಾಧಗಳ ಬಗ್ಗೆ ಜನರನ್ನು ಎಚ್ಚರಗೊಳಿಸುವುದು, ಡ್ರಗ್ಸ್ ರಹಿತ ಆರೋಗ್ಯಕರ ಜೀವನಶೈಲಿಗೆ ಯುವಕರನ್ನು ಉತ್ತೇಜಿಸುವುದು ಹಾಗೂ “ವ್ಯಸನವಿಲ್ಲದ ಕರ್ನಾಟಕ” ನಿರ್ಮಿಸುವುದಾಗಿದೆ. ಈ ಸ್ತಬ್ಧಚಿತ್ರವು ಡ್ರಗ್ಸ್‌ನ ಮನೋವೈಜ್ಞಾನಿಕ, ದೈಹಿಕ ಮತ್ತು ಸಾಮಾಜಿಕ ಹಾನಿಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದೆ.
ಡಿಸೆಂಬರ್ 25ರಂದು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ಕುಲಕರ್ಣಿ, ಐಪಿಎಸ್, ಸಹಾಯಕ ಪೊಲೀಸ್ ಆಯುಕ್ತರು (ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋ), ಮಂಗಳೂರು, ಉದ್ಘಾಟಕರಾಗಿರಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ರಾಘವೇಂದ್ರ ಹೊಳ್ಳ, ಅಧ್ಯಕ್ಷರು – ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್; ಡಾ. ಮಳಿನಿ ಎನ್ ಹೆಬ್ಬಾರ್, ಪ್ರಾಂಶುಪಾಲರು; ಸಿಎ. ಶಾಂತರಾಮ್ ಶೆಟ್ಟಿ, ಅಧ್ಯಕ್ಷರು – ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದ.ಕ. ಶಾಖೆ; ಡಾ. ಮುರಳಿ ಮೋಹನ್ ಚೂಂತಾರು, ಕಾರ್ಯಕಾರಿ ಸಮಿತಿ ಸದಸ್ಯರು – ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು; ರಮೇಶ್ ಕೆ., ಪ್ರಧಾನ ಸಲಹೆಗಾರರು – ಶಕ್ತಿ ಎಜುಕೇಷನಲ್ ಟ್ರಸ್ಟ್; ರವಿಚಂದ್ರ ಪಿ.ಎಮ್., ವಕೀಲರು, ಮಂಗಳೂರು ಹಾಗೂ ವಿದ್ಯಾಲಕ್ಷ್ಮಿ ಪಿ. ಶೆಟ್ಟಿ, NSS ಸಂಯೋಜಕರು ಉಪಸ್ಥಿತರಿರಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕರು, ಸಮಾಜದ ಪ್ರತಿಯೊಬ್ಬ ನಾಗರಿಕರು, ಸರಕಾರಿ–ಸರಕಾರೇತರ ಸಂಸ್ಥೆಗಳು, ಸ್ವಯಂಸೇವಕ ಸಂಘಟನೆಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಯುವ ಹಾಗೂ ಕ್ರೀಡಾ ಸಂಘಟನೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. “ನಮ್ಮ ಯುವಕರ ರಕ್ಷಣೆ – ನಮ್ಮ ದೇಶದ ರಕ್ಷಣೆ” ಎಂಬ ಸಂದೇಶದೊಂದಿಗೆ ಈ ಅಭಿಯಾನವು ಸಮುದಾಯದಲ್ಲಿ ಸಕಾರಾತ್ಮಕ ಸಾಮಾಜಿಕ ಬದಲಾವಣೆ ತರುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಯಿತು.