ಪುತ್ತೂರು: ಪ್ರತಿವರ್ಷವೂ ಪುತ್ತೂರಿನಲ್ಲಿ ಆಯೋಜಿಸಲ್ಪಡುವ ಅಟ್ಟಾ ಮುಟ್ಟಾ ನಾಟಕೋತ್ಸವಕ್ಕೆ ಅದರದ್ದೇ ಆದ ಹಿರಿಮೆ ಗರಿಮೆ ಇದೆ. ಸಮಾಜಮುಖಿ ಚಿಂತನೆಯುಳ್ಳ, ಜಾಗೃತಿ ಮೂಡಿಸುವ ಆಶಯವುಳ್ಳ ನಾಟಕಗಳು ಅಟ್ಟಾ ಮುಟ್ಟಾ ವೇದಿಕೆಯಲ್ಲಿ ಪ್ರದರ್ಶಿತವಾಗುತ್ತವೆ. ಈ ವರ್ಷವೂ ಸುಮಾರು ಏಳು ನಾಟಕಗಳು ಪ್ರದರ್ಶನಗೊಂಡಿದ್ದು ಇದರಲ್ಲಿ ಸುದಾನ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ‘ಬದುಕಿನ ಬೆಳಕು’ ಎಂಬ ವಿಜ್ಞಾನ ನಾಟಕವೂ ಪ್ರಸ್ತುತಗೊಂಡಿತ್ತು.
ಜೀವನವನ್ನು ಸುಗಮಗೊಳಿಸಲೋಸುಗ ವಿಜ್ಞಾನವನ್ನು ಊರುಗೋಲಾಗಿಸಿಕೊಂಡ ಮಾನವ ತನ್ನ ಅತ್ಯಾಸೆ ಮತ್ತು ಅಸಡ್ಡೆಗಳಿಂದಾಗಿ ತನ್ನ ಸ್ವಾಸ್ಥ್ಯವನ್ನೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾನೆ ಎನ್ನುವುದನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸಿತು. ಡೆಂಗ್ಯೂ, ಮಲೇರಿಯಾ, ರೇಬಿಸ್ ಮುಂತಾದ ಸಾಂಕ್ರಾಮಿಕ ರೋಗಗಳ ಹಬ್ಬುವಿಕೆಗೆ ಮನುಷ್ಯ ಹೇಗೆ ಕಾರಣವಾಗುತ್ತ್ತಿದ್ದಾನೆ; ವಿಜ್ಞಾನದ ಅರಿವು ಮತ್ತು ಆವಿಷ್ಕಾರಗಳ ಉಪಯೋಗದೆಡೆಗಿನ ಎಚ್ಚರ ಎಷ್ಟು ಅಗತ್ಯ ಎನ್ನುವ ಜಾಗೃತಿಯನ್ನು ಮೂಡಿಸುವಲ್ಲಿ ನಾಟಕವು ಯಶಸ್ವಿಯಾಯಿರು. ಬದುಕಿಗೆ ಬೆಳಕಾಗಬಹುದಾದ ವಿಜ್ಞಾನವನ್ನು ಅರಿವಿದ್ದು ಬಳಸಿಕೊಂಡರೆ ಅದು ಜಗದ ಬೆಳಕಾಗುತ್ತದೆ ಎನ್ನುವ ಸಂದೇಶವನ್ನು ನಾಟಕವು ಸಮರ್ಥವಾಗಿ ಅಭಿವ್ಯಕ್ತಿಗೊಳಿಸಿತು.
ನಾಟಕದ ಯಶಸ್ವಿ ಪ್ರದರ್ಶನಕ್ಕೆ ಕಥೆಯೊಂದಿಗೆ ರಂಗಸಜ್ಜಿಕೆ, ಪಾತ್ರಾಭಿನಯ ಮತ್ತು ಅಭಿವ್ಯಕ್ತಿಯ ಚಮತ್ಕಾರಗಳೂ ಅತ್ಯಂತ ಮುಖ್ಯ. ‘ಬದುಕಿನ ಬೆಳಕು’ ಈ ಎಲ್ಲಾ ರೀತಿಯಿಂದಲೂ ಚೊಕ್ಕವಾಗಿ ರೂಪುಗೊಂಡಿದ್ದು, ಸನ್ನಿವೇಶಗಳನ್ನು ಬೆರಗುಮೂಡುವಂತೆ
ರೂಪಿಸಲಾಗಿತ್ತು. ಸೊಳ್ಳೆಗಳ ರೂಪದಲ್ಲಿ ಕಾಣಿಸಿಕೊಂಡ ಪಾತ್ರಧಾರಿಗಳು ತಮ್ಮ ಅಭಿನಯವಷ್ಟೇ ಅಲ್ಲದೆ ವೇಷ- ಭೂಷಣಗಳಿಂದಲೂ ಗಮನಸೆಳೆದರು. ರೇಬಿಸ್ ರೋಗಕ್ಕೆ
ತುತ್ತಾದಾಗ ರೋಗಿಯುಪಡುವ ದೀನಾವಸ್ಥೆಯನ್ನು ಕು. ಮಾನ್ವಿ ಬಹಳ ಪರಿಣಾಮಕಾರಿಯಾಗಿ ಅಭಿನಯಿಸಿದಳು. ಕೌಟುಂಬಿಕವಾಗಿ, ಸಾಮಾಜಿಕವಾಗಿ ಜನರು ಪಡುವ ತೊಂದರೆ,
ಕಷ್ಟ-ನಷ್ಟಗಳನ್ನು ಮಕ್ಕಳು ಮಾರ್ಮಿಕವಾಗಿ ಅಭಿನಯಿಸಿದರು.
ನಾಟಕದಲ್ಲಿ ಬಳಕೆಯಾದ ಹಾಡು, ರಂಗ ಪರಿಕರ, ದೃಶ್ಯ ಸಂಯೋಜನೆಗಳು ಸಮರ್ಥ ನಿರ್ದೇಶನವನ್ನು ಧ್ವನಿಸುತ್ತಿದ್ದವು. ಒಟ್ಟಿನಲ್ಲಿ ಕೌಶಲ್ಯಪೂರ್ಣವಾಗಿ ಮತ್ತು ಮನೋರಂಜನಾತ್ಮಕವಾಗಿ ಪ್ರದರ್ಶಿತವಾದ ಬದುಕಿನ ಬೆಳಕು ನಾಟಕವು ಸಾಮಾಜಿಕ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ನಾಟಕದ ಕಥೆ, ಪರಿಕಲ್ಪನೆಯನ್ನು ಮಾಡಿದ ವಿಜ್ಞಾನ ಶಿಕ್ಷಕಿ ಪೂಜಾ ಎಂ.ವಿ, ನಿರ್ದೇಶನವನ್ನು ಮಾಡಿದ ಕಲಾಶಿಕ್ಷಕ ಶಿವಗಿರಿ ಕಲ್ಲಡ್ಕ ಮತ್ತು ಅಭಿನಯಿಸಿದ ಸುದಾನ ಶಾಲೆಯ ವಿದ್ಯಾರ್ಥಿಗಳು ಅಭಿನಂದನಾರ್ಹರು. ನಾಟಕರಂಗದಲ್ಲಿ ಸುದಾನ ಶಾಲೆಯು ಭರವಸೆಯ ಬೆಳಕಾಗಿ ಮೂಡಿಬಂದಿದ್ದು ಇನ್ನಷ್ಟು ಉತ್ತಮ ನಾಟಕಗಳು ಬೆಳಕು ಕಾಣಲಿ, ಉತ್ತಮ ನಟ-ನಟಿಯರು ರೂಪುಗೊಳ್ಳಲಿ.