ಕೃಷ್ಣಾಪುರದಲ್ಲಿ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶಾಲೆಗೆ ಮೂಲಸೌಕರ್ಯ ಅಗತ್ಯ: ಕ್ಯಾ. ಚೌಟ
ಸುರತ್ಕಲ್: ಆರ್ಥಿಕವಾಗಿ ಕೆಳಸ್ತರದಲ್ಲಿರುವ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತ ಆಗಬಾರದು. ಹೆಚ್ಚಿನ ಮಕ್ಕಳು ಇರುವ ಶಾಲೆಗಳು ಮೂಲಸೌಕರ್ಯದಿಂದ ಅಭಿವೃದ್ಧಿ ಹೊಂದುವುದು ಅಗತ್ಯ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ಉತ್ತರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ 5ನೇ ಬ್ಲಾಕ್ ಕೃಷ್ಣಾಪುರ, ಕಾಟಿಪಳ್ಳ ಇಲ್ಲಿ ಎಂಆರ್‌ಪಿಎಲ್, ಎನ್‌ಎಂಪಿಎ ಸಿಎಸ್‌ಆರ್ ಒಟ್ಟು 60 ಲಕ್ಷ ಅನುದಾನದಿಂದ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಸಮಾರಂಭದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಶಾಸಕ ಡಾ.ಭರತ್ ಶೆಟ್ಟಿ ವೈ. ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಮೂಲಸೌಕರ್ಯ ರೂಪಿಸಿಕೊಳ್ಳಲು ಹಳೆ ವಿದ್ಯಾರ್ಥಿ ಸಂಘ ಶ್ಲಾಘನೀಯ ಕೆಲಸ ಮಾಡುತ್ತಾ ಬಂದಿದೆ. ಈ ಹಿಂದೆ ಸಿಎಸ್‌ಆರ್ ನಿಧಿಯಿಂದ ಸಭಾಭವನ ನಿರ್ಮಿಸಿ ಕೊಡಲಾಗಿದೆ. ಆಂಗ್ಲ ಮಾಧ್ಯಮ ವಿಭಾಗದಲ್ಲಿ ಶಿಕ್ಷಣವನ್ನು ಕೊಡಲಾಗುತ್ತಿದ್ದು ಎಂಟನೇ ತರಗತಿಯಿಂದ
ಹತ್ತನೇ ತರಗತಿಯವರೆಗೆ ಮುಂಬರುವ ದಿನಗಳಲ್ಲಿ ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಶಿಕ್ಷಣವನ್ನು ನೀಡುವ ಮೂಲಕ, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಂಆರ್ ಪಿಎಲ್‌ಸಿಎಸ್‌ಆರ್ ವಿಭಾಗದ ಚೀಫ್ ಮ್ಯಾನೇಜರ್ ಎಂ.ಕೆ. ರಾವ್ ಶುಭ ಹಾರೈಸಿ ಎಂಆರ್‌ಪಿಎಲ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ತಿಲಕ್ ರಾಜ್ ಕೃಷ್ಣಾಪುರ, ಮಾಜಿ ಕಾರ್ಪೊರೇಟರ್ ಲಕ್ಷ್ಮೀಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮುಡಾಯಿ ಕೋಡಿ, ಶಿಕ್ಷಣ ಇಲಾಖೆಯ ಅಧಿಕಾರಿ ಮಹಮ್ಮದ್ ಸಿಕಂದರ್, ಪಿಡಬ್ಲ್ಯೂಡಿ ಎಂಜಿನಿಯರ್ ಗೋಕುಲ್ ದಾಸ್ ಮುಖ್ಯ ಶಿಕ್ಷಕರುಗಳಾದ ಜಾಹೀದಾ ಮುತ್ತಹಿರ್, ಚಂದ್ರಾವತಿ, ಎಸ್ ಡಿ ಎಂ ಸಿ ಅಧ್ಯಕ್ಷ ನರೇಶ್ ಅಮೀನ್ ಇದ್ದರು. ಅಶೋಕ್ ಕೃಷ್ಣಾಪುರ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು