ಕುಂದಾಪುರ, 23 ಎಪ್ರಿಲ್ 2025: ಇಂಗ್ಲೀಷ್ ಜಾಗತಿಕ ಭಾಷೆಯಾಗಿದ್ದು, ಇಂದು ಆ ಭಾಷೆಯ ಅರಿವು ಅಗತ್ಯ. ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಅದರಲ್ಲಿನ ಲಾಲಿತ್ಯ ಮತ್ತು ಅರ್ಥ ವಿಶೇಷತೆಗಳನ್ನು ಅರಿತಾಗ ಇಂಗ್ಲೀಷ್ ಕಲಿಕೆ ಸುಲಭ ಸಾಧ್ಯ. ಇದನ್ನು ಅರಿಯಲು ಕವಿ ಶೇಕ್ಸ್ಪಿಯರ್‌ನ ನಾಟಕಗಳು ಮತ್ತು ಕವಿತೆಗಳು ಸಹಾಯ ಮಾಡುತ್ತವೆ ಎಂದು ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ವನಿತಾ ಜೆ. ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಮತ್ತು ಇಂಗ್ಲೀಷ್ ಸಂಘದ ಆಶ್ರಯದಲ್ಲಿ ಕವಿ ಶೇಕ್ಸ್ಪಿಯರ್‌ನ ಹುಟ್ಟಿದ ಮತ್ತು ಮರಣ ದಿನವಾದ ಇಂಗ್ಲೀಷ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು, ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ., ಇಂಗ್ಲೀಷ್ ಸಂಘದ ಸಂಯೋಜಕರಾದ ಶ್ರೀ ಸ್ಟಾಲಿನ್ ಡಿಸೋಜ, ಶ್ರೀಮತಿ ಸ್ವಾತಿ ಜಿ. ರಾವ್ ಉಪಸ್ಥಿತರಿದ್ದರು. ಇಂಗ್ಲೀಷ್ ಡೇ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಯ ಬಹುಮಾನಿತರ ಪಟ್ಟಿಯನ್ನು ಕಾರ್ಯಕ್ರಮದ ಸಂಯೋಜಕಿ ರವೀನಾ ಸಿ. ಪೂಜಾರಿ ವಾಚಿಸಿದರು. ವಿದ್ಯಾರ್ಥಿಗಳಾದ ಐಶ್ವರ್ಯ ಸ್ವಾಗತಿಸಿ, ವೈಷ್ಣವಿ ಅತಿಥಿಗಳನ್ನು ಪರಿಚಯಿಸಿ, ಅಭಿಷೇಕ್ ವಂದಿಸಿ, ಸ್ವಸ್ತಿಕ್ ನಿರೂಪಿಸಿದರು.