ಕುಂದಾಪುರ, 27 ನವಂಬರ್ 2024 : ದೈಹಿಕ, ಮಾನಸಿಕ ದೃಢತೆಗೆ ಕ್ರೀಡೆ ಸಹಕಾರಿ. ಕ್ರೀಡೆಯ ಮೂಲಕ ಮನೋವಿಕಾಸ ಹೊಂದಲು ಸಾಧ್ಯ. ಶಿಸ್ತುಬಧ್ಧತೆ, ಸಮಯಪ್ರಜ್ಞೆ ಇವುಗಳು ಕ್ರೀಡೆಯ ಮೂಲಕ ಅರ್ಥೈಸಿಕೊಳ್ಳಲು ಸಾಧ್ಯ. ದಿಟ್ಟ ಗುರಿಯೊಡನೆ ನಿರಂತರ ಪರಿಶ್ರಮ – ಅಭ್ಯಾಸಗಳೆಡೆಗೆ ತೆರೆದುಕೊಂಡಲ್ಲಿ ಕ್ರೀಡೆ ಬದುಕನ್ನು ಹಸನಾಗಿಸುವುದು ಎಂದು ಶ್ರೀ ಉಮೇಶ್ ಎನ್. ಶೆಟ್ಟಿ, ನಮನ ಐಎನ್‌ಸಿ, ಯು.ಎಸ್.ಎ. ಹೇಳಿದರು.
ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವನಾತ್ಮಕ ನೆಲೆಯ ಮಾನಸಿಕ ಸದೃಢತೆಯನ್ನು ಕಾಪಾಡುವಲ್ಲಿ ಬರಿಯ ಅಂಕ ಕೇಂದ್ರಿತ ಓದು ನಿಷ್ಕಿçಯವೆನಿಸುವುದು, ಸೋಲಿನ ಕುರಿತಾದ ಅಳುಕು, ಸಂಕೋಚಗಳನ್ನು ಬದಿಗೊತ್ತಿ ಓದಿನೊಂದಿಗೆ ಕ್ರೀಡೆಗೂ ಮಹತ್ವ ನೀಡಿ ಎಂದು ಹೇಳಿದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ವಸಂತ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸಚಿನ್ ಶೆಟ್ಟಿ ಹುಂಚ್ನಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ರಂಜಿತ್ ಟಿ.ಎನ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಸಿದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಯೋಗೀಶ್ ಶ್ಯಾನುಭೋಗ್ ವಂದಿಸಿ, ಪೂಜಾ ಕುಂದರ್ ನಿರೂಪಿಸಿದರು. ವಿದ್ಯಾರ್ಥಿಗಳಾದ ಶ್ರೀಶಾಂತ್ ಪ್ರಾರ್ಥಿಸಿ, ನಿಶಾಂತ್ ಗ್ರೆಗರಿ ಡಿ’ಸೋಜಾ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.