ಕುಂದಾಪುರ, 18 ಏಪ್ರಿಲ್ 2025: ಶ್ರಮಸಂಸ್ಕೃತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಪರಿಪೂರ್ಣವಾದ ಸಂಸ್ಕಾರ ಪಡೆಯಲು ಸಾಧ್ಯ. ಭಾರತೀಯತೆ ಮತ್ತು ಇಲ್ಲಿನ ಸಂಸ್ಕೃತಿಗೆ ಜಗತ್ತಿನಾದ್ಯಂತ ಮಹತ್ವವಿದೆ. ಈ ಸಂಸ್ಕೃತಿ, ಸಂಪ್ರದಾಯವನ್ನು ಅನುಸರಿಸಿ ಬದುಕುವಂತಾದಾಗ ಜೀವನ ಹಸನಾಗುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಸಮಾಜಸೇವಕರಾದ ಬೆಂಗಳೂರಿನ ಮೈಸೂರು ಮರ್ಕಂಟೈಲ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಎಚ್.ಎಸ್. ಶೆಟ್ಟಿ ಇವರು ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿರುವ ಸಾಂಪ್ರದಾಯಿಕ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭ ಸಂಸ್ಥೆಯ ಆಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜಸೇವೆಯನ್ನೇ ಬದುಕಾಗಿಸಿಕೊಂಡು ಸಂಪ್ರದಾಯವನ್ನು ಗೌರವಿಸುವವರನ್ನು ನೋಡಿ ಕಲಿಯುವಂತಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಅವುಗಳ ಮೌಲ್ಯವನ್ನು ವಿದ್ಯಾರ್ಥಿಗಳು ಅರಿಯುವಂತಾದಾಗ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶೀಮತಿ ರೇಷ್ಮಾ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯದರ್ಶಿ ವಿನಾಯಕ್ ಅಡಿಗ ಉಪಸ್ಥಿತರಿದ್ದರು.
ಕಾಲೇಜಿನ ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ವಿಘ್ನೇಶ್ವರ ಸ್ವಾಗತಿಸಿ, ಕೀರ್ತಿ ಕೆ. ಶೆಟ್ಟಿ ವಂದಿಸಿದರು. ಎಸ್.ಕ್ಯೂ.ಎ.ಸಿ. ಪ್ರತಿನಿಧಿ ಶೃದ್ಧಾ ಆರ್. ನಿರೂಪಿಸಿದರು.