ವಾಮಂಜೂರು, 12 ಅಕ್ಟೋಬರ್ 2024: ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕ ಕ್ರೀಡೋತ್ಸವವು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಥನಿ ಸಂಸ್ಥೆ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕರೂ ಹಾಗೂ ಕಾಲೇಜು ಸಂಚಾಲಕರೂ ಆಗಿರುವ ವಂ!ಭ! ಮಾರಿಯೋಲಾ ಬಿ.ಎಸ್ ರವರು ಮಾತನಾಡಿ ಸದೃಢ ದೇಹ ಹಾಗೂ ಸದೃಢ ಮನಸ್ಸನ್ನು ಹೊಂದಲು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯಕ. 2024ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಎಲ್ಲಾ ಕ್ರೀಡಾಸ್ಪರ್ಧಿಗಳಲ್ಲಿ ಸಹನೆ ಮತ್ತು ಹೊಂದಾಣಿಕೆಯ ಗುಣಗಳನ್ನು ಬೆಳೆಸುವ ಕ್ರೀಡಾಕೂಟವಾಗಲಿ ಎಂದು ಶುಭ ಹಾರೈಸಿದರು. ಸ್ಥಳೀಯ ಸಂತ ಜೋಸೆಫ್ ಶ್ರಮಿಕ ಧರ್ಮ ದೇವಾಲಯದ ಧರ್ಮ ಗುರುಗಳಾದ ರೆ! ಫಾ! ಜೇಮ್ಸ್ ಡಿಸೋಜ ರವರು ಸಮಾರಂಭದಲ್ಲಿ ಆಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್, ಇದರ ಸಂಸ್ಥಾಪಕರಾದ ಶ್ರೀ ರಾಘವೇಂದ್ರ ಹೊಳ್ಳರವರು ಮಾತನಾಡಿ ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯ ಲಭಿಸಲಿ ಎಂದು ಶುಭಹಾರೈಸಿದರು.
ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಕಡತಾಲರವರು ಮಾತನಾಡಿ ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು ಎಂದರು. ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಪೋಷಕರು ಮತ್ತು ಶಿಕ್ಷಕರಿಗೆ ಮೋಜು ತುಂಬಿದ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.
ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಭ! ಅನಿತಾ ಲೀಡಿಯಾ,
ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಭ! ಲವಿಟಾ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಭ! ವಿದ್ಯಾ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಭ! ಶಾಂತಿ ಫ಼್ಲಾವಿಯಾ, ಪದವಿ ಕಾಲೇಜಿನ ಪ್ರಾಚಾರ್ಯರಾದ ಭ! ಜೆಸಿಂತಾ ಕ್ರಾಸ್ತಾ, ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಖಜಾಂಜಿಗಳಾದ ಶ್ರೀಮತಿ ರೇಷ್ಮಾ ಪಾಯ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶ್ರೀಮತಿ ಲಿಖಿತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಅವಿಟಾ ಸ್ವಾಗತಿಸಿದರು. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಜಯರಾಮ್ ರವರು ವಂದಿಸಿದರು.