ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಹೃದಯಸ್ಪರ್ಶಿ ನಿರ್ಧಾರ

ಪುತ್ತೂರು: ಇಡಿಯ ಭಾರತ ಇಂದು ಶೋಕತಪ್ತವಾಗಿದೆ. ದೇಶದ ಮುಕುಟಮಣಿಯಂತೆ ಶೋಭಿಸುತ್ತಿದ್ದ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿದಿದೆ. ಧರ್ಮದ್ವೇಷದ ಜ್ವಾಲೆಗೆ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ನಮ್ಮ ದೇಶದ ಭೂಭಾಗದೊಳಗೆ ನಮ್ಮ ಪ್ರಜೆಗಳೇ ವಿಹರಿಸುವುದಕ್ಕೆ ಭಯಮೂಡಿಸುವ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಶಾಂತವಾಗಿದ್ದ ಕಣಿವೆ ಪ್ರದೇಶ ಇದೀಗ ಭಯಭೀತವಾದ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿ ನಿಂತಿದೆ. ದೇಶದ ಸೌಂದರ್ಯವನ್ನು ಆಸ್ವಾದಿಸಲು ಹೋದವರು, ಮದುವೆಯ ಸಂಭ್ರಮವನ್ನು ಸವಿನೆನಪಾಗಿ ಪರಿವರ್ತಿಸಲು ಪ್ರಯಾಣ ಮಾಡಿದವರು ಶೋಕ ಸಮುದ್ರದಲ್ಲಿ ಮುಳುಗಿದ್ದಾರೆ. ದುರುಳ ಭಯೋತ್ಪಾದಕರ ವಿಧ್ವಂಸಕಾರಿ ದುರಾಚಾರಕ್ಕೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ತೀವ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದೆ. ಭಾರತ ಹಾಗೂ ಸನಾತನ ಧರ್ಮಗಳು ಸದಾ ಸರ್ವಜನಾಂಗಕ್ಕೂ ಆಶ್ರಯದಾತವೆನಿಸಿವೆ. ಎಲ್ಲರನ್ನೂ ಒಳಗೊಳ್ಳುವ ಭಾವವನ್ನು ಪ್ರಕಟಿಸುತ್ತಲೇ ಬಂದಿವೆ.

ಆದರೆ ನಮ್ಮ ದೇಶದೊಳಗಿದ್ದು, ದೇಶದ ಅನ್ನವನ್ನೇ ಉಂಡು ಈ ದೇಶಕ್ಕೆ ದ್ರೋಹ ಬಗೆಯುವ ವ್ಯಕ್ತಿಗಳೂ ಅಲ್ಲಿಲ್ಲಿ ಮನೆಮಾಡಿಕೊಂಡು ಭಯೋತ್ಪಾದಕರ ಜತೆ ಶಾಮೀಲಾಗುತ್ತಿರುವುದು ದುರಂತ ಹಾಗೂ ಶೀಕ್ಷಾರ್ಹವಾದದ್ದು. ಈ ನೆಲೆಯಲ್ಲಿ ಭಯೋತ್ಪಾದಕ ಶಕ್ತಿಯ ಜತೆಗೆ ಅವರಿಗೆ ಆಶ್ರಯವೀಯುವ ಮಂದಿಯನ್ನೂ ಮಟ್ಟ ಹಾಕಬೇಕೆಂಬುದು ಉಲ್ಲೇಖಾರ್ಹ.

ಈ ಮಧ್ಯೆ ಸಂತ್ರಸ್ತರ ಜತೆ ನಿಲ್ಲಬೇಕಾದದ್ದು ಸಮಸ್ತ ನಾಗರಿಕ ಸಮುದಾಯದ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ, ಸದಾ ದೇಶಪ್ರೇಮ, ಧರ್ಮ ರಕ್ಷಣೆ ಬಗೆಗೆ ತುಡಿಯುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳೂ ಕಾಶ್ಮೀರ ದಾಳಿಯ ಸಂತ್ರಸ್ತರ ಜತೆ ನಿಲ್ಲುವ ಮೂಲಕ ಅವರಿಗೊಂದು ಸಾಂತ್ವನ ನೀಡುವ ಪ್ರಯತ್ನಕ್ಕಿಳಿಯುತ್ತಿದೆ. ಈ ನಿಟ್ಟಿನಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ದುಷ್ಕೃತ್ಯಕ್ಕೆ ಬಲಿಯಾದ ವ್ಯಕ್ತಿಗಳ ಮಗ ಅಥವ ಮಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುವುದಕ್ಕೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.

ನಟ್ಟೋಜ ಫೌಂಡೇಶನ್ ಟ್ರಸ್ಟ್ ತನ್ನ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ), ವಸತಿಯುಕ್ತ ಹಾಗೂ ದೈನಂದಿನ ಓಡಾಟಕ್ಕನುಗುಣವಾಗಿನ ಎರಡು ಪ್ರತ್ಯೇಕ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಎಲ್.ಕೆ.ಜಿ ತರಗತಿಯಿಂದ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರದ ಭಯೋತ್ಪಾದಕ ದಾಳಿಯ ಸಂತ್ರಸ್ತರ ಮಕ್ಕಳಿಗೆ
ಈ ಉಚಿತ ಶಿಕ್ಷಣದ ಸೌಲಭ್ಯ ದೊರಕಲಿದೆ. ಜತೆಗೆ ಊಟೋಪಚಾರ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿದೆ.

ದೇಶದ ಬಗೆಗೆ, ನೊಂದವರ ಬಗೆಗೆ ಅಪಾರ ಭಾವನೆ ಹೊಂದಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಈ ಹಿಂದೆ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯದ ಘೋರತೆಯನ್ನು ಮನಗಂಡು ಕಾಶ್ಮೀರಿ ಸಂತ್ರಸ್ತ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು. ಅದರನ್ವಯ ಇಬ್ಬರು ವಿದ್ಯಾರ್ಥಿಗಳು ಕಾಶ್ಮೀರದಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ
ಆಗಮಿಸಿ ಪಿಯು ಶಿಕ್ಷಣಕ್ಕಾಗಿ ದಾಖಲಾತಿ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಷ್ಟಲ್ಲದೆ ದೇಶದ ರಕ್ಷಣೆಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ನಮ್ಮೆಲ್ಲರನ್ನು ಸಂರಕ್ಷಿಸುವ ಸೈನಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಅಂಬಿಕಾ ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ನೀಡುತ್ತಿದೆ. ಪುತ್ತೂರು ಸುತ್ತಮುತ್ತಲಿನ ಪ್ರದೇಶದ ಸೈನಿಕರು ನಿವೃತ್ತರಾಗಿ ಮರಳಿ ಬಂದಾಗ ಅವರನ್ನು ಮೆರವಣಿಗೆ ಮೂಲಕ ಕರೆತಂದು ಆದರಿಸಿ ಸನ್ಮಾನಿಸುವ ಪದ್ಧತಿಯನ್ನೂ ಅಂಬಿಕಾ ನಡೆಸಿಕೊಂಡು ಬರುತ್ತಿದೆ. ಪುತ್ತೂರಿನಲ್ಲಿ ದಿನಪೂರ್ತಿ ಜ್ಯೋತಿ ಉರಿಯುತ್ತಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ರಚಿಸಿದ ಧನ್ಯತೆಯೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗಿವೆ.

ಈಗಾಗಲೇ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳ ವತಿಯಿಂದ ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆದು, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವಂತೆ ದೇಶದ ಗೃಹ ಸಚಿವರಿಗೆ ಆಗ್ರಹಪೂರ್ವಕ ಪತ್ರವನ್ನು ಪುತ್ತೂರಿನ ಸಹಾಯಕ ಆಯುಕ್ತರ ಮುಖೇನ ಕಳುಹಿಸಿಕೊಡಲಾಗಿದೆ. ಮುಂದುವರಿದ ಭಾಗವಾಗಿ, ಸಂತ್ರಸ್ತರ ಜತೆ ನಿಲ್ಲುವ, ತನ್ಮೂಲಕ ಅವರಿಗೆ ನೈತಿಕ ಬೆಂಬಲ ನೀಡುವುದರೊಂದಿಗೆ ತಮ್ಮ ತಂದೆಯನ್ನು ಕಳೆದುಕೊಂಡ ಮಕ್ಕಳು ಶಿಕ್ಷಣಕ್ಕಾಗಿ ಕಿಂಚಿತ್ತೂ ಕಷ್ಟಪಡುವಂತಾಗಬಾರದೆದೆಂಬ ಉದ್ದೇಶದೊಂದಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ಸಹಿತ ಸಂಪೂರ್ಣ ಉಚಿತ ಶಿಕ್ಷಣವನ್ನು ಘೋಷಿಸಲಾಗುತ್ತಿದೆ.

ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು
ಮಾತೃಸಂಸ್ಥೆ: ನಟ್ಟೋಜ ಫೌಂಡೇಶನ್ ಟ್ರಸ್ಟ್ (ರಿ),

ಪುತ್ತೂರು, ದ.ಕ. – 574201
9448835488 / 8197251489

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…